ಜಿಲ್ಲೆ

ಶ್ರೀರಾಮನಂತೆ ಪಿತೃವಾಕ್ಯ ಪರಿಪಾಲಿಸಿ

ಶಿರಸಿ: ನಗರದ ಯಕ್ಷ ಸಂಭ್ರಮ ಟ್ರಸ್ಟ್ 9ನೇ ವರ್ಷದ ವಾರ್ಷಿಕ ತಾಳಮದ್ದಳೆ ಸರಣಿ ಸೆ. 9ರಿಂದ ಆರಂಭವಾಗಿದ್ದು, ಪ್ರಥಮ ದಿನ ಸ್ವರ್ಣವಲ್ಲೀಯಲ್ಲಿ, ಎರಡನೇ ದಿನದಿಂದ ಎಂಟು ದಿನಗಳ ಕಾಲ ಶಿರಸಿ ಟಿಎಂಎಸ್ ಸಭಾಂಗಣದಲ್ಲಿ ನಡೆಯಲಿದೆ.

ರಾಮಾಯಣದ ಪ್ರಮುಖ ಪ್ರಸಂಗಗಳನ್ನು ಪ್ರಸ್ತುತಪಡಿಸಲಿರುವ ಶ್ರೀರಾಮ ನವರತ್ನಮ್ ಸರಣಿಗೆ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಚಾಲನೆ ನೀಡಿ, 2023ರ ಚಂದುಬಾಬು ಪ್ರಶಸ್ತಿಯನ್ನು ಹಿರಿಯ ಅರ್ಥಧಾರಿ, ವಿದ್ವಾಂಸ, ಸಂಶೋಧಕ, ಕವಿ ಅತ್ತಿಮುರುಡು ವಿಶ್ವೇಶ್ವರ ಹೆಗಡೆ ಅವರಿಗೆ ಶನಿವಾರ ಪ್ರದಾನ ಮಾಡಿದರು.

ನಂತರ ಆಶಿರ್ವಚನ ನೀಡಿದ ಶ್ರೀಗಳು, ಮಕ್ಕಳು ತಂದೆ -ತಾಯಿ ಮಾತನ್ನು ಗೌರವಿಸುವುವದನ್ನು ಕಲಿಯಬೇಕು. ಇಂದು ಮಕ್ಕಳು ಏನಾದರೂ ಮಾಡಲಿ ಎಂದು ಪಾಲಕರು ಬಿಟ್ಟು ಬಿಡುತ್ತಾರೆ. ಆದರೆ, ಪಾಲಕರೂ ಒಂದು ಹಿಡಿತ ಇಟ್ಟುಕೊಂಡು ಮಕ್ಕಳು ಸನ್ಮಾರ್ಗಿಗಳಾಗಿ ನಡೆದುಕೊಳ್ಳುವದನ್ನು ಕಲಿಸಬೇಕಿದೆ. ಶ್ರೀರಾಮನಂತೆ ಪಿತೃವಾಕ್ಯ ಪರಿಪಾಲನೆ ಪಾಲಿಸುವ ಮಕ್ಕಳು ಹೆಚ್ಚಾಗಬೇಕು ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿಶ್ವೇಶ್ವರ ಹೆಗಡೆ ಅತ್ತಿಮುರುಡು, ಇದೊಂದು ಧನ್ಯತೆಯ ಕ್ಷಣ. ಸನ್ಯಾಸಿಗಳನ್ನು ಹಿಮಾಲಯಕ್ಕೂ, ಗ್ರಹಸ್ಥರನ್ನೂ ಸಾಸಿವೆ ಕಾಳಿಗೂ ಹೋಲಿಸುವರು. ಇಲ್ಲಿ ಹಿಮಾಲಯ ಸಾಸಿವೆ ಕಾಳನ್ನು ಸಮ್ಮಾನಿಸಿದೆ ಎಂದರು.

ಕಟೀಲಿನ ಶ್ರೀಹರಿ ನಾರಾಯಣ ದಾಸ ಆಸ್ರಣ್ಣ, ತಾಳಮದ್ದಲೆ ಮೂಲಕ ಲೌಕಿಕವಾಗಿ ಬರುವ ಅನೇಕ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ಸಾಧ್ಯ ಇದೆ ಎಂದರು.

ಟ್ರಸ್ಟ್ ಅಧ್ಯಕ್ಷ ಕೇಶವ ಹೆಗಡೆ ಗಡೀಕೈ, ಕೋಶಾಧ್ಯಕ್ಷ ಸೀತಾರಾಮ ಚಂದು, ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಹೆಗಡೆ ಕೆಶಿನಮನೆ, ಅಶೋಕ ಹಾಸ್ಯಗಾರ, ಇಂದಿರಾ ಹೆಗಡೆ ಚಂದು ಇತರರು ಇದ್ದರು.

ಬಳಿಕ ಪ್ರಥಮ ದಿನದ ಶ್ರೀ ರಾಮಾದರ್ಶ ತಾಳಮದ್ದಲೆ ನಡೆಯಿತು. ಐನಬೈಲ್ ಪರಮೇಶ್ವರ ಹೆಗಡೆ,ರವೀಂದ್ರಭಟ್ಟ ಅಚವೆ, ಎನ್.ಜಿ. ಹೆಗಡೆ, ಭಾರ್ಗವ ಹೆಗ್ಗೋಡು ಹಿಮ್ಮೇಳದಲ್ಲಿ ಸಹಕಾರ ನೀಡಿದರು. ವಿ.ಆರ್. ಹೆಗಡೆಅತ್ತಿಮುರಡು, ಶ್ರೀಹರಿ ನಾರಾಯಣ ದಾಸ ಆಸ್ರಣ್ಣ, ವಿಶ್ವೇಶ್ವರ ಭಟ್ಟ ಸುಣ್ಣಂಬಳ, ವಾಸುದೇವ ರಂಗಾ ಭಟ್ಟ, ಪ್ರಸಾದ ಭಟ್ಟಕಳ, ಮಂಜುನಾಥ ಗೊರಮನೆ, ವಿ. ಮಹೇಶ ಭಟ್ಟ ಇಡಗುಂದಿ, ಸ್ಮಿತಾ ಜೋಶಿ ಪಾತ್ರ ಕಟ್ಟಿಕೊಟ್ಟರು.