ಕೊಳ್ಳೇಗಾಲದಲ್ಲಿ ಆಯೋಜಿಸಿದ್ದ ಸಂಚಾರ ಮತ್ತು ರಸ್ತೆ ಸುರಕ್ಷತೆ ಜಾಗೃತಿ ಅಭಿಯಾನಕ್ಕೆ ಎಸ್ಪಿ ಕವಿತಾ ಚಾಲನೆ ನೀಡಿದರು. ಎಂ.ಧರ್ಮೇಂದ್ರ, ಎ.ರಮೇಶ್, ಕೃಷ್ಣಪ್ಪ, ಮಹೇಶ್ ಕುಮಾರ್ ಇದ್ದರು. 
ಜಿಲ್ಲೆ

ಸಂಚಾರ, ರಸ್ತೆ ಸುರಕ್ಷತಾ ನಿಯಮ ಪಾಲನೆಯಾಗಲಿ

ಅಭಿನಯ್ ಎಚ್.ಎಂ

ಕೊಳ್ಳೇಗಾಲ: ಆಟೋ, ಕಾರು ಸೇರಿದಂತೆ ಇತರ ವಾಹನಗಳ ಚಾಲಕರು ಸಂಚಾರ ಮತ್ತು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕವಿತಾ ಸಲಹೆ ನೀಡಿದರು.

ಪಟ್ಟಣದ ಕಲ್ಯಾಣ ಮಂಟಪವೊಂದರಲ್ಲಿ ಮಂಗಳವಾರ ಪಟ್ಟಣ ಪೊಲೀಸ್ ಠಾಣೆ ವತಿಯಿಂದ ಆಯೋಜಿಸಿದ್ದ ಸಂಚಾರ ಮತ್ತು ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು. ಸಂಚಾರ ನಿಯಮಗಳ ಪಾಲನೆಯಿಂದ ಅಪಘಾತಗಳನ್ನು ನಿಯಂತ್ರಿಸಬಹುದು. ವಾಹನ ಪರವಾನಗಿ, ವಿಮೆ ಇತರ ದಾಖಲೆಗಳು ಅಪಘಾತದ ಸಂದರ್ಭದಲ್ಲಿ ಚಾಲಕರು ಹಾಗೂ ಕುಟುಂಬದ ನೆರವಿಗೆ ಬರಲಿದೆ ಎಂದರು.

ಪೊಲೀಸರಿಗೆ ದುಡಿಮೆಯ ಹಣವನ್ನು ದಂಡದ ರೂಪದಲ್ಲಿ ಕಟ್ಟಿಸಿಕೊಳ್ಳಲು ಇಷ್ಟವಿಲ್ಲ. ಇದನ್ನು ವಾಹನ ಚಾಲಕರು ಅರ್ಥ ಮಾಡಿಕೊಳ್ಳಬೇಕು. ಅಗತ್ಯ ದಾಖಲೆಗಳಿದ್ದರೆ ವಾಹನ ಚಲಾಯಿಸಬೇಕು. ಕುಡಿದು ವಾಹನಗಳನ್ನು ಓಡಿಸಿದರೆ ಅಮೂಲ್ಯವಾದ ಜೀವಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಹುತೇಕ ಆಟೋ ಚಾಲಕರು ಸಮವಸ್ತ್ರ ಧರಿಸುವುದಿಲ್ಲ. ಖಾಕಿ ಹಾಕಿಕೊಳ್ಳುವವರು ಸಮಾಜ ಸೇವಕರು. ಹಾಗಾಗಿ ಹೆಮ್ಮೆಯಿಂದ ಖಾಕಿತೊಟ್ಟು ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ 8 ಜನರು ಅಪಘಾತದಲ್ಲಿ ಸತ್ತಿದ್ದಾರೆ. ಈ ಪೈಕಿ 4 ಜನರು ಹೆಲ್ಮೆಟ್ ಧರಿಸಿದ್ದರೆ ಬದುಕುತ್ತಿದ್ದರು ಎಂದ ಅವರು, ಅಕ್ರಮ ಚಟುವಟಿಕೆ ಕಂಡು ಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ಅಂತಹವರ ಹೆಸರನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದರು.

ಡಿವೈಎಸ್ಪಿ ಎಂ.ಧರ್ಮೇಂದ್ರ ಮಾತನಾಡಿ, ಪ್ಯಾಸೆಂಜರ್ ಆಟೋಗಳಲ್ಲಿ ನಿಗದಿತ ಸೀಟ್‌ಗಳಿಗಿಂತಲೂ ಹೆಚ್ಚು ಜನರನ್ನು ಕರೆದೊಯ್ಯ ಲಾಗುತ್ತಿದೆ. ಅಪಾಯದ ಸ್ಥಿತಿಯಲ್ಲಿ ಶಾಲಾ ಮಕ್ಕಳನ್ನು ಆಟೋದಲ್ಲಿ ಕರೆದುಕೊಂಡು ಹೋಗಲಾಗುತ್ತಿದೆ. ಚಾಲಕರು ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳನ್ನು ಮೊದಲು ತಿಳಿದುಕೊಳ್ಳಬೇಕು ಎಂದರು.

ಆಟೋ ಚಾಲಕ ಲೋಕೇಶ್ ಮಾತನಾಡಿ, ಪಟ್ಟಣದ ರಸ್ತೆಗಳು ಹದಗೆಟ್ಟಿದೆ. ಡಾ.ಬಿ. ಆರ್.ಅಂಬೇಡ್ಕರ್ ರಸ್ತೆ, ಡಾ.ರಾಜ್ ಕುಮಾರ್ ವಿಸ್ತರಣೆಯಾಗಿಲ್ಲ. ಜತೆಗೆ ವಾಹನ ದಟ್ಟನೆಯೂ ಹೆಚ್ಚಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಕವಿತಾ, ಸ್ಥಳದಲ್ಲಿದ್ದ ನಗರಸಭೆ ಆಯುಕ್ತ ಎಂ.ರಮೇಶ್ ಅವರಿಗೆ ರಸ್ತೆ ದುರಸ್ತಿ ಬಗ್ಗೆ ಗಮನಹರಿಸುವಂತೆ, ಟ್ರಾಫಿಕ್ ಸಮಸ್ಯೆ ಕಡಿವಾಣಕ್ಕೆ ಇಲಾಖೆಗೆ ಸಹಕಾರ ನೀಡುವಂತೆ ಮನವಿ ಮಾಡಿದರು.

.