ಆಲೂರು ಪಟ್ಟಣದ ತಾಲೂಕು ಮಿನಿ ವಿಧಾನಸೌಧದಲ್ಲಿ ತಾಲೂಕಿನ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಸಂತ ಸೇವಾಲಾಲ್ ಜಯಂತಿ, ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಹಾಗೂ ಸರ್ವಜ್ಞರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಗಣ್ಯರು ಪುಷ್ಪಾರ್ಚನೆ ಮಾಡಿದರು. 
ಜಿಲ್ಲೆ

ಮಹನೀಯರ ತತ್ವ, ಆದರ್ಶಗಳನ್ನು ಅನುಸರಿಸಿ

ಆಲೂರು:  ತಮ್ಮ ಆದರ್ಶ ಮತ್ತು ತತ್ವಗಳ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರೇಷ್ಠ ಕೊಡುಗೆ ನೀಡಿದ ಮಹಾನ್ ಪುರುಷ ಸಂತ ಸೇವಾಲಾಲ್. ಅವರು ಸಮಾಜದಲ್ಲಿ ಒಗ್ಗಟ್ಟಿನ ಪಾಠ ಮಾಡಿದ್ದಾರೆ ಎಂದು ಸಾಹಿತಿ ಡಾ.ಶಾಂತ ಅತ್ನಿ ಹೇಳಿದರು.

ಪಟ್ಟಣದ ತಾಲೂಕು ಮಿನಿ ವಿಧಾನಸೌಧದಲ್ಲಿ ತಾಲೂಕಿನ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಸಂತ ಸೇವಾಲಾಲ್ ಜಯಂತಿ, ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಹಾಗೂ ಸರ್ವಜ್ಞರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜದಲ್ಲಿ ಜಾತಿ ಪದ್ಧತಿಯಂತಹ ದುಷ್ಟ ವ್ಯವಸ್ಥೆಗಳ ವಿರುದ್ಧ ಹೋರಾಟ ನಡೆಸಿದ ದಾರ್ಶನಿಕ ಸೇವಾಲಾಲ್ ಮಾನವ ಜನ್ಮಕ್ಕೆ ಅಭೂತಪೂರ್ವ ಚಿಂತನೆಗಳನ್ನು ನೀಡಿದ್ದಾರೆ. ಅವರ ಮಾರ್ಗದರ್ಶನ ನಮಗೆ ಪ್ರೇರಣೆಯಾಗಬೇಕು ಎಂದರು.

ಶಿವಾಜಿ ಮಹಾರಾಜರು ಈ ದೇಶ ಕಂಡ ಅತಿ ಶ್ರೇಷ್ಠ ಮಹಾಪುರುಷ. ಅವರು ಯಾರ ವಿರುದ್ಧವೂ ಇರಲಿಲ್ಲ. ಎಲ್ಲ ಸಮುದಾಯಗಳನ್ನು ಒಟ್ಟಾಗಿ ತೆಗೆದುಕೊಂಡು ಆಡಳಿತ ನಡೆಸಿದರು. ಅನೇಕ ದೊಡ್ಡ ಹುದ್ದೆಗಳನ್ನು ಅಲ್ಪಸಂಖ್ಯಾತ ಸಮುದಾಯದವರಿಗೆ ನೀಡಿದ್ದರು. ಸರ್ವಜ್ಞ ತನ್ನ ವಚನದ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದಾರೆ ಎಂದರು.

ಬಂಜಾರ ಸಮುದಾಯದ ಹಾಸನದ ಜಿಲ್ಲಾಧ್ಯಕ್ಷ ಸೋಮನಾಯಕ್ ಮಾತನಾಡಿ, ಈ ನಮ್ಮ ದೇಶದ ನೆಲ ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿದ್ದು, ಈ ವೈವಿಧ್ಯತಾ ಸಂಸ್ಕೃತಿಗೆ ಹಲವಾರು ಸಾಂಸ್ಕೃತಿಕ ರಾಯಭಾರಿಗಳು ಕಾರಣೀಭೂತರು. ಭಾರತ ನೆಲದಲ್ಲಿ ಹಲವು ಸಂತರು, ಧರ್ಮ ಸುಧಾರಕರು, ತತ್ವಜ್ಞಾನಿಗಳು ಜನ್ಮ ತಾಳಿ ಜನರಲ್ಲಿನ ತಮಂಧತೆಯನ್ನು ಹೋಗಲಾಡಿಸಿದ್ದಾರೆ. ಇಂತಹ ಮಹಾನ್ ಸಂತರು ಬಂಜಾರ ಸಮುದಾಯದ ಆರಾಧ್ಯ ದೈವ ಸದ್ಗುರು ಸಂತ ಸೇವಾಲಾಲ್ ಮಹಾರಾಜರು ಒಬ್ಬರು. ಲಂಬಾಣಿ ಸಮುದಾಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಹರಪ್ಪ, ಸಿಂಧು ನಾಗರಿಕತೆ ಕಾಲದಲ್ಲಿ ಬಂಜಾರ ಜನಾಂಗದವರ ಕುರಿತು ಇತಿಹಾಸಗಳಲ್ಲಿ ತಿಳಿದು ಬರುತ್ತದೆ. ಎಲ್ಲ ಸಮಾಜದ ಜನರೊಂದಿಗೆ ಒಳ್ಳೆಯವರಾಗಿ ನಡೆದುಕೊಂಡು ಹೋಗಬೇಕೆಂದು ಸೇವಾಲಾಲರು ಸಾರಿದ್ದು, ಅದರಂತೆ ನಾವೆಲ್ಲರೂ ನಡೆದುಕೊಳ್ಳಬೇಕು ಎಂದರು.

ಶಿರಸ್ತೇದಾರ್ ಅಂಕೇಗೌಡ, ದೈಹಿಕ ಶಿಕ್ಷಣ ಪರಿವೀಕ್ಷಕ ಗೋವಿಂದೆಗೌಡ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ತಾಲೂಕು ಪಂಚಾಯಿತಿ ಎಡಿ ಕೇಶವ್, ಬಂಜಾರ ಸಮುದಾಯದ ತಾಲೂಕು ಅಧ್ಯಕ್ಷ ರವಿ ನಾಯಕ, ತಾಲೂಕು ದಲಿತ ಸಂಚಾಲಕ ಬಸವರಾಜ್ ಗೇಕರವಳ್ಳಿ ಸೇರಿದಂತೆ ತಾಲೂಕು ಕಚೇರಿಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಹಾಜರಿದ್ದರು.