ಜಿಲ್ಲೆ

ಸ್ವಾಮಿ ವಿವೇಕಾನಂದರ ತತ್ವಾದರ್ಶ ಪಾಲಿಸಿ


ಕೊಡಗು : ಯುವಕರು ಸ್ವಾಮಿ ವಿವೇಕಾನಂದ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ತಿಳಿಸಿದರು.


ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯ ಎನ್‌ಎಸ್‌ಎಸ್, ಸಮಾಜ ಸಂಘ, ವಿದ್ಯಾರ್ಥಿ ಸಂಘ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಘಟಕದಿಂದ ಶುಕ್ರವಾರ ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಯಿತು.


ಸ್ವಾಮಿ ವಿವೇಕಾನಂದ ಅವರು ಏಳಿ.. ಎದ್ದೇಳಿ, ಗುರಿ ಮುಟ್ಟುವತನಕ ನಿಲ್ಲದಿರಿ ಎಂಬ ಸಂದೇಶ ನೀಡಿದರು. ಈ ವಾಕ್ಯ ಯುವ ಸಮೂಹವನ್ನೇ ಬಡಿದೆಬ್ಬಿಸುವ ಕೆಲಸ ಮಾಡುತ್ತಿದೆ. ಅಲ್ಲದೇ ವಿವೇಕಾನಂದ ಅವರ ದಿನವನ್ನು ಯುವಕರ ದಿನವಾಗಿ ಆಚರಿಸುವಂತೆ ತಿಳಿಸಿದರು.


ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ಅಧ್ಯಕ್ಷ ಎಂ.ಸಂಪತ್ ಕುಮಾರ್ ಮಾತನಾಡಿ, ಸ್ವಾಮಿ ವಿವೇಕಾನಂದರು ಉದಾತ್ತ ವ್ಯಕ್ತಿತ್ವ, ಜೀವನ ಕ್ರಮ, ದೂರದೃಷ್ಟಿ ಹಾಗೂ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡಿದ್ದರು. ಇದರಿಂದಾಗಿಯೇ ಅವರು ಜೀವನದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದರು ಎಂದು ಹೇಳಿದರು.


ಸ್ವಾಮಿ ವಿವೇಕಾನಂದರ ಜೀವನ ಕ್ರಮ ಕುರಿತು ಮಾಹಿತಿ ನೀಡಿದ ಸಮಾಜ ವಿಜ್ಞಾನ ಶಿಕ್ಷಕಿ ಎಸ್.ಎಂ.ಗೀತಾ, ಪ್ರತಿ ವರ್ಷ ಜನವರಿ 12 ಅನ್ನು ರಾಷ್ಟ್ರೀ ಯುವ ದಿನವನ್ನು ದೇಶದಾದ್ಯಂತ ಆಚರಣೆ ಮಾಡಲಾಗುತ್ತಿದೆ. ಸ್ವಾಮಿ ವಿವೇಕಾನಂದರು ಭಾರತಕ್ಕೆ ಮಾತ್ರವಲ್ಲದೇ ಪ್ರಪಂಚದ ಇತರ ದೇಶಗಳಿಗೂ ಅವರ ತತ್ವಗಳು, ಬದುಕಿದ ಹಾದಿ, ಯುವ ಜನತೆಗೆ ನೀಡಿದ ಸ್ಫೂರ್ತಿ ಎಂದು ಬಣ್ಣಿಸಿದರು.


ಸ್ವಾಮಿ ವಿವೇಕಾನಂದರು ವಿವಿಧ ವಿಷಯಗಳ ಬಗ್ಗೆ, ವಿಶೇಷವಾಗಿ ತತ್ವಶಾಸ್ತ್ರ ಮತ್ತು ಇತಿಹಾಸದ ಬಗ್ಗೆ ಅಪಾರ ಜ್ಞಾನವನ್ನು ಪಡೆದು ವಿಶ್ವದ ಗಮನ ಸೆಳೆದು ಆಧ್ಯಾತ್ಮಿಕ ಚಿಂತಕರಾಗಿದ್ದರು ಎಂದರು.


ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಹಾಯಕ ಆಯುಕ್ತೆ ಸಿ.ಎಂ.ಸುಲೋಚನಾ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಸಂಯಮ ಬೆಳೆಸಿಕೊಂಡು ರಾಷ್ಟ್ರೀಯ ನಾಯಕರ ಆದರ್ಶ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದರು. ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ದಯಾನಂದ ಪ್ರಕಾಶ್, ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಬಿ.ಎನ್.ಸುಜಾತಾ, ಬಿ.ಡಿ.ರಮ್ಯಾ, ಅನ್ಸಿಲಾ ರೇಖಾ, ಇದ್ದರು. ಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ವಿವೇಕಾನಂದರ ಸಂದೇಶದ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಮಕ್ಕಳಿಗೆ ರಾಷ್ಟ್ರೀಯ ಯುವ ದಿನದ ಅಂಗವಾಗಿ ಏರ್ಪಡಿಸಿದ್ದ ಭಾಷಣ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಇದಕ್ಕೂ ಮೊದಲು ರಾಷ್ಟ್ರೀಯ ಯುವ ದಿನದ ಅಂಗವಾಗಿ ಶಾಲಾ ಮೈದಾನದಲ್ಲಿ ರಾಷ್ಟ್ರೀಯ ಏಕತೆಗಾಗಿ ಮ್ಯಾರಥಾನ್ ಓಟ ಏರ್ಪಡಿಸಲಾಗಿತ್ತು.