ಮುಂಡರಗಿ: ಬಸವಾದಿ ಶರಣರು ತೋರಿದ ಹಾದಿಯಲ್ಲಿ ಪ್ರತಿಯೊಬ್ಬರೂ ನಡೆಯಬೇಕು. ಕಾಯಕ, ದಾಸೋಹ ಮತ್ತು ಲಿಂಗಪೂಜೆ ನಿಷ್ಠೆಗಳನ್ನು ಜೀವನದಲ್ಲಿ ಪಾಲಿಸಿಕೊಂಡು ಮುನ್ನಡೆದರೆ ಬಾಳಿನಲ್ಲಿ ಹೊಸತನ ಬದುಕು ನಮ್ಮದಾಗುತ್ತದೆ ಎಂದು ಚಿಂತಕ ದೇವೇಂದ್ರಪ್ಪ ರಾಮೇನಹಳ್ಳಿ ಹೇಳಿದರು.
ಪಟ್ಟಣದಲ್ಲಿ ಶರಣ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಮತ್ತು ಚೈತನ್ಯ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶರಣ ಚಿಂತನ ಮಾಲೆ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಗದ್ಗುರು ಅನ್ನದಾನೀಶ್ವರ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕಿ ಶಶಿಕಲಾ ಕುಕನೂರ ಮಾತನಾಡಿ, ಶರಣ ದಂಪತಿಗಳಾದ ಆಯ್ದಕ್ಕಿ ಮಾರಯ್ಯ ಮತ್ತು ಲಕ್ಕಮ್ಮನವರ ಕಾಯಕ ನಿಷ್ಠೆ ಮತ್ತು ದಾಸೋಹ ಶ್ರದ್ಧೆಯನ್ನು ಹೊಂದಿದ್ದರು. ಅವರ ನಡುವಿನ ಸಂಭಾಷಣೆ ಮತ್ತು ಆಕೆಯ ಹಲವಾರು ವಚನಗಳಲ್ಲಿ ವ್ಯಕ್ತವಾದ ದಾಸೋಹದ ಕುರಿತಾದ ಪ್ರೀತಿಯನ್ನು ಮತ್ತು ದಾಸೋಹವನ್ನು ಅನೂಚಾನವಾಗಿ ನಡೆಸಿಕೊಂಡು ಬರಲು ಶರಣ ಧರ್ಮ ಹೇಗೆ ನೆರವಾಗುತ್ತದೆ ಎಂಬುದನ್ನು ವಿವರವಾಗಿ ತಿಳಿಸಿದರು.
ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸೀತಾ ಬಸಾಪುರ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ, ಎಸ್‌ಬಿಕೆ ಗೌಡರ, ಎಸ್.ಆರ್. ಬಸಾಪೂರ, ಡಾ.ನಿಂಗು ಸೊಲಗಿ, ಶಂಕರ ಕುಕನೂರ, ಆರ್.ಬಿ. ಹಕ್ಕಂಡಿ, ಎಂ.ಎಸ್. ಶೀರನಹಳ್ಳಿ, ಮಹೇಶ್ವರ ಮೇಟಿ, ಕಾವೇರಿ ಬೋಲಾ, ಪ್ರತಿಭಾ ಹೊಸಮನಿ, ಉಮಾ ದೊಡ್ಡಮನಿ, ಸುಮಿತ್ರಾ ಜಾಧವ, ಗಿರಿಜಾ ಕೋರಿಶೆಟ್ಟರ, ಅಕ್ಕಮಹಾದೇವಿ ಕೊಟ್ಟೂರಶೆಟ್ಟರ, ಗಿರಿಜಾ ಸೂಡಿ, ಮಂಜುನಾಥ ಮುಧೋಳ, ಕೃಷ್ಣ್ಣ ಸಾಹುಕಾರ, ಆರ್.ವೈ. ಪಾಟೀಲ, ಎಸ್.ಕೆ. ಹುಬ್ಬಳ್ಳಿ, ಎಸ್.ಸಿ. ಚಕ್ಕಡಿಮಠ, ಮಂಜುನಾಥ ಅಳವಂಡಿ, ರತ್ನಾ ಕಾಗನೂರಮಠ, ರಾಯನಗೌಡ, ಲಿಂಗರಾಜ ದಾವಣಗೆರೆ ಇದ್ದರು.
ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಆರ್.ಎಲ್.ಪೊಲೀಸಪಾಟೀಲ ಸ್ವಾಗತಿಸಿದರು. ಜಯಶ್ರೀ ಅಳವಂಡಿ ಪ್ರಾರ್ಥಿಸಿದರು. ಚೈತನ್ಯ ಶಿಕ್ಷಣ ಸಂಸ್ಥೆ ನಿರ್ದೇಶಕಿ ವೀಣಾ ಪಾಟೀಲ ವಂದಿಸಿದರು.