ಕ್ರೀಡಾಕೂಟದಲ್ಲಿ ಶಾಸಕ ಎಂ.ಆರ್ ಮಂಜುನಾಥ್ ಕ್ರೀಡಾಜ್ಯೋತಿ ಬೆಳಗಿಸಿದರು.  
ಜಿಲ್ಲೆ

ಕ್ರೀಡೆ ಜತೆಗೆ ಸಾಧನೆ ಮಾರ್ಗ ಅನುಸರಿಸಿ

ಹನೂರು : ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸುವ ಮನೋಭಾವನೆ ಬೆಳೆಸಿಕೊಳ್ಳುವುದರ ಜತೆಗೆ ಸಾಧನೆಯ ಮಾರ್ಗವನ್ನು ಅನುಸರಿಸಬೇಕು ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.

ಪಟ್ಟಣದ ಶ್ರೀ ಮಲೆಮಹದೇಶ್ವರ ಕ್ರೀಡಾಂಗಣದಲ್ಲಿ ಬುಧವಾರ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ವಿಭಾಗ), ಹನೂರಿನ ಶ್ರೀ ವಿವೇಕಾನಂದ ಹಾಗೂ ರಾಮಾಪುರ ಜೆಎಸ್‌ಎಸ್ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ 2024-25ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಗಡಿ ಜಿಲ್ಲೆ ಚಾಮರಾಜನಗರದಲ್ಲಿ ವಿವಿಧ ರಂಗದಲ್ಲಿ ಪ್ರತಿಭಾನ್ವಿತರಿದ್ದು, ಅದರಲ್ಲೂ ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿದ್ದಾರೆ. ರಾಜ್ಯಮಟ್ಟದಲ್ಲಿ ಪ್ರತಿನಿಧಿಸಿದ ಜಯಗಳಿಸಿದ ಕ್ರೀಡಾಪಟುಗಳಿರುವುದು ಮೆಚ್ಚುವ ಸಂಗತಿ. ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಜಯಗಳಿಸುವ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲೂ ವಿಜಯ ಸಾಧಿಸಬೇಕು. ಈ ಮೂಲಕ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.

ದೈಹಿಕ ಶಿಕ್ಷಣ ಶಿಕ್ಷಕರು ಪ್ರತಿ ತಾಲೂಕಿನಲ್ಲಿ ಕ್ರೀಡಾ ಪ್ರತಿಭಾನಿತ್ವರನ್ನು ಗುರ್ತಿಸುವ ಕೆಲಸವಾಗಬೇಕಿದೆ. ಉತ್ತಮ ತರಬೇತಿ ನೀಡಿ ಕ್ರೀಡೆಗೆ ಉತ್ತೇಜನ ನೀಡಬೇಕು. ಇದರಿಂದ ಮುಂದಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಕ್ರೀಡಾಪಟುಗಳ ಸಂಖ್ಯೆ ಹೆಚ್ಚಾಗಲು ಸಹಕಾರಿಯಾಗಿದೆ. ಈ ಮೂಲಕ ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಪ್ರತಿನಿಧಿಸಿ ಜಿಲ್ಲೆಗೆ ಕೀರ್ತಿ ಗಳಿಸಬಹುದು. ಈ ದಿಸೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕ್ರೀಡೆಗೆ ಹೆಚ್ಚು ಉತ್ತೇಜನ ನೀಡುವುದರ ಮೂಲಕ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.

ಜಿಮ್ ಪಾರ್ಕ್ ಸ್ಥಾಪನೆಗೆ ಮನವಿ: ಹನೂರು ಸೇರಿದಂತೆ ಕೊಳ್ಳೇಗಾಲ, ಯಳಂದೂರು, ಚಾ.ನಗರ ಹಾಗೂ ಗುಂಡ್ಲುಪೇಟೆ ತಾಲೂಕಿನ ವಿವಿಧ ಕಾಲೇಜಿನಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಆಕರ್ಷಕ ಪಥ ಸಂಚಲನ ನಡೆಸಿ ಗಣ್ಯರಿಗೆ ಗೌರವ ವಂದನೆ ಸಲ್ಲಿಸಿದರು. ಶಾಸಕ ಎಂ.ಆರ್. ಮಂಜುನಾಥ್ ಕ್ರೀಡಾಜ್ಯೋತಿ ಬೆಳಗಿಸಿದರು. ಶಾಂತಿ ಸಂಕೇತವಾದ ಪಾರಿವಾಳಗಳನ್ನು ಹಾರಿ ಬಿಡುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಶ್ರೀ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಜಿ.ಮಧುಸೂದನ್ ಅವರು ಕ್ರೀಡಾಪಟುಗಳು ಹಾಗೂ ಪಟ್ಟಣದ ನಾಗರಿಕರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಪಟ್ಟಣದ ಕ್ರೀಡಾಂಗಣದಲ್ಲಿ ಜಿಮ್ ಪಾರ್ಕ್ ಸ್ಥಾಪಿಸುವಂತೆ ಇದೇ ವೇಳೆ ಮನವಿ ಮಾಡಿದರು. ಇದಕ್ಕೆ ಶಾಸಕರು ಅಗತ್ಯ ಭರವಸೆ ನೀಡಿದರು. ಉಪ ನಿರ್ದೇಶಕ ಮಂಜುನಾಥ್ ಪ್ರಸನ್ನ ಅವರು ಕ್ರೀಡಾಂಗಣದ ಅಭಿವೃದ್ಧಿಗೆ ಕ್ರಿಯಾಯೋಜನೆಯನ್ನು ತಯಾರಿಸುವುದಾಗಿ ಶಾಸಕರಿಗೆ ಭರವಸೆ ನೀಡಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಮ್ತಾಜ್ ಬಾನು, ಉಪಾಧ್ಯಕ್ಷ ಆನಂದ್, ಸದಸ್ಯರಾದ ಪವಿತ್ರ, ಮಹೇಶ್, ಬಿಇಒ ಗುರುಲಿಂಗಯ್ಯ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮಹಾದೇವ, ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ನರೇಂದ್ರನಾಥ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕೆಂಪರಾಜು, ಶ್ರೀ ವಿವೇಕಾನಂದ ಶಿಕ್ಷಣ ಸಂಸ್ಥೆ ಸಂಚಾಲಕ ರಾಜೇಂದ್ರನ್, ಕಾರ್ಯದರ್ಶಿ ಸುರೇಶ್‌ನಾಯ್ಡು ಹಾಗೂ ಇನ್ನಿತರರು ಇದ್ದರು.