ಜಿಲ್ಲೆ

ಸಿದ್ಧಗಂಗಾ ಶ್ರೀಗಳ ಕಾಯಕ ತತ್ವ ಅನುಸರಿಸಿ

ವೀರಶೈವ ಲಿಂಗಾಯತ ಮಹಾಸಭಾ ಗ್ರಾಮಾಂತರ ಜಿಲ್ಲಾಧ್ಯಕ್ಷ ರೇವಣ್ಣಸಿದ್ದಯ್ಯ ಸಲಹೆ

ನೆಲಮಂಗಲ: ಶಿವಕುಮಾರ ಸ್ವಾಮೀಜಿ ಸ್ಮರಣೆ ಮಾಡುವ ಜತೆಗೆ ಅವರ ದಾರಿಯಲ್ಲಿ ನಾವು ಸಾಗಬೇಕು, ಆಗ ಸ್ಮರಣೋತ್ಸವ ಸಾರ್ಥಕವಾಗುತ್ತದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಗ್ರಾಮಾಂತರ ಜಿಲ್ಲಾಧ್ಯಕ್ಷ ರೇವಣ್ಣಸಿದ್ದಯ್ಯ ಹೇಳಿದರು.

ನಗರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಸಮಿತಿಯಿಂದ ಮಂಗಳವಾರ ಆಯೋಜಿಸಿದ್ದ ಡಾ.ಶಿವಕುಮಾರಸ್ವಾಮೀಜಿ ಪುಣ್ಯಸ್ಮರಣೆ ಹಾಗೂ ದಾಸೋಹ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ತ್ರಿವಿಧ ದಾಸೋಹಿಗಳಾದ ಡಾ.ಶಿವಕುಮಾರ ಸ್ವಾಮೀಜಿ ಭೌತಿಕವಾಗಿ ನಮ್ಮೊಂದಿಗೆ ಇಲ್ಲದೇ ಇದ್ದರೂ ಮಾನಸಿಕವಾಗಿ ನಮ್ಮೊಂದಿಗೆ ಇದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣ ಎಲ್ಲ ಧರ್ಮದವರಿಗೆ ಇಷ್ಟಲಿಂಗವನ್ನು ಕೊಟ್ಟರು. ಶಿವಕುಮಾರಸ್ವಾಮೀಜಿ ಅದನ್ನು ಪ್ರಚೂರಪಡಿಸಿದರು. ಇಷ್ಟಲಿಂಗ ಪೂಜೆಯನ್ನು ಇಷ್ಟಪಟ್ಟು ಮಾಡುತ್ತಲೇ ತಮ್ಮ ಶಕ್ತಿ ಪಡೆದುಕೊಳ್ಳುತ್ತಿದ್ದರು. ಆಧುನಿಕ ಶಿಕ್ಷಣದಿಂದ ನಮ್ಮ ಸಮಾಜದ ಸಂಸ್ಕೃತಿ, ಸಂಸ್ಕಾರ ಕಣ್ಮರೆಯಾಗುತ್ತಿದ್ದು, ಮಕ್ಕಳನ್ನು ಸರಿದಾರಿಗೆ ತರುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಶ್ರೀಗಳ ಕಾಯಕ ತತ್ವ ಅನುಸರಿಸಬೇಕಿದೆ ಎಂದರು.

ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಪೂರ್ಣಿಮಾ ಸುಗ್ಗರಾಜು ಮಾತನಾಡಿ, ಹುಟ್ಟು-ಸಾವುಗಳನ್ನು ಮೀರಿ ಬಸವಣ್ಣ ಅವರು ತೋರಿದ ದಾರಿಯಲ್ಲಿ ಶ್ರೀಗಳು ನಡೆದರು. ಕಾಯಕ ತತ್ವ ಹಾಗೂ ದಾಸೋಹ ಪರಿಕಲ್ಪನೆಯನ್ನು ನಿರಂತವಾಗಿಮಾಡಿಕೊಂಡ ಬಂದ ಶ್ರೀಗಳು ಕಾರ್ಯ ಮಹತ್ವವಾದದ್ದು ಎಂದರು.

ನಗರಸಭೆ ಸದಸ್ಯೆ ಲೋಕಾಕ್ಷಿಗಂಗಾಧರ್, ವೀರಶೈವ ಮಹಾಸಭಾ ಕೇಂದ್ರ ನಿರ್ದೇಶಕ ನಟರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್, ನಿರ್ದೇಶಕಿ ರಾಜಮ್ಮಪ್ರಕಾಶ್, ಮಹಿಳಾ ಘಟಕ ತಾಲೂಕು ಅದ್ಯಕ್ಷೆ ವೇದಾವತಿ, ತಾಲೂಕುಮಾಜಿಅದ್ಯಕ್ಷ ಶಾಂತಕುಮಾರ್, ಅಣ್ಣಪ್ಪ, ವೀರಶೈವ ಬ್ಯಾಂಕ್ ಅದ್ಯಕ್ಷ ಎಂ.ಜಿ.ಲೋಕೇಶ್, ಟೌನ್ ಕೋ ಆಪರೇಟಿವ್ ಬ್ಯಾಂಕ್ ಅದ್ಯಕ್ಷ ಚನ್ನಬಸರಾಜು, ಬಿಎಂಟಿಸಿಮಾಜಿ ನಿರ್ದೇಶಕ ಬೃಂಗೇಶ್ ಉಪಸ್ಥಿತರಿದ್ದರು.

3 ಸಾವಿರ ಜನಕ್ಕೆ ದಾಸೋಹ: ಡಾ.ಶಿವಕುಮಾರಸ್ವಾಮೀಜಿ ಪುಣ್ಯಸ್ಮರಣೆ ಹಾಗೂ ದಾಸೋಹ ದಿನದ ಪ್ರಯುಕ್ತ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಸಮಿತಿಯಿಂದ ನಗರದ ಸುಭಾಷ್‌ನಗರ, ತಾಲೂಕು ಕಚೇರಿ ಅವರಣ ಸೇರಿ ಅಡೇಪೇಟೆಯ ಶ್ರೀ ರುದ್ರೇಶ್ವರ ದೇವಾಲಯ ಬಳಿ ಸುಮಾರು 3 ಸಾವಿರಕ್ಕೂ ಹೆಚ್ಚು ಮಂದಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು ಎಂದು ಮಹಾಸಭಾ ತಾಲೂಕು ಅದ್ಯಕ್ಷ ಎನ್.ರಾಜಶೇಖರ್ ತಿಳಿಸಿದರು.