ದೇವದುರ್ಗ: ರೈತರು ಬಿತ್ತನೆ ಬೀಜ, ರಸಗೊಬ್ಬರ ಸೇರಿ ಕೃಷಿ ಉಪಕರಣಗಳನ್ನು ತಯಾರಿಸುವ ಉತ್ಪಾದಕ ಸಂಸ್ಥೆಯನ್ನು ರಚಿಸಿ ಸ್ವಾವಲಂಬಿಗಳಾಗಬೇಕು ಎಂದು ಕೃಷಿ ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ.ದೇವೇಂದ್ರ ಬೀರಲದಿನ್ನಿ ಹೇಳಿದರು.
ಇದನ್ನೂ ಓದಿ:ವಿಕಸಿತ ಕೃಷಿ ಸಂಕಲ್ಪ ಅಭಿಯಾನ
ತಾಲೂಕಿನ ಗೂಗಲ್ ಗ್ರಾಮದಲ್ಲಿ ದೇವದುರ್ಗ ಕೃಷಿ ವಿಸ್ತರಣಾ ಕೇಂದ್ರ, ರಾಯಚೂರು ಕೃಷಿ ವಿಜ್ಞಾನ ಕೇಂದ್ರ, ಭಾರತೀಯ ಕೃಷಿ ಸಂಶೋಧನಾ ಅನುಸಂಧಾನ ಪರಿಷತ್ ಹಾಗೂ ಕೃಷಿ ಇಲಾಖೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ರೈತರು ಸಾಂಪ್ರದಾಯಿಕ ಕೃಷಿ ಜತೆ ಆಧುನಿಕ ಹಾಗೂ ವೈಜ್ಞಾನಿಕ ಕೃಷಿ ಪದ್ಧತಿ ಅನುಸರಿಸಬೇಕು. ಯಂತ್ರಾಧರಿತ ಕೃಷಿಗೆ ಆದ್ಯತೆ ನೀಡುವುದರಿಂದ ಕೃಷಿ ಚಟುವಟಿಕೆಗಳು ಚುರುಕುಗೊಂಡು ಖರ್ಚು ಕಡಿಮೆಯಾಗಲಿದೆ. ಮುಂಗಾರು ಹಂಗಾಮು ಆರಂಭವಾಗಿದ್ದು, ಉತ್ತಮ ಇಳುವರಿ ನೀಡುವಂಥ ಹೊಸ ತಳಿಗಳು ಹಾಗೂ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸುಸ್ಥಿರ ಕೃಷಿಯಿಂದ ಹೆಚ್ಚಿನ ಆದಾಯ ಗಳಿಸಬಹುದು ಎಂದು ತಿಳಿಸಿದರು.
ರಾಷ್ಟ್ರೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ವಿಜ್ಞಾನಿ ಡಾ.ಜಯಾ ರಾಘವೇಂದ್ರ ಮಾತನಾಡಿ, ರೈತರು ಮಿಶ್ರ ಬೆಳೆ ಬೆಳೆಯಬೇಕು. ಕಡಿಮೆ ಜಮೀನಿನಲ್ಲಿ ತರಕಾರಿ, ಹೂವು, ತೋಟಗಾರಿಕೆ ಬೆಳೆಗಳನ್ನು ಬೆಳೆಯಬಹುದು. ಇದರಿಂದ ಹೆಚ್ಚಿನ ಆದಾಯ ಪಡೆಯಲು ಸಾಧ್ಯ. ಬೆಳೆಗಳಿಗೆ ಬರುವ ರೋಗಗಳ ಬಗ್ಗೆ ಕೃಷಿ ವಿಜ್ಞಾನಿಗಳಿಂದ ಮಾಹಿತಿ ಪಡೆದು ಸೂಕ್ತ ಕೀಟನಾಶಕ ಬಳಸಬೇಕು ಎಂದರು.
ಪಶು ವಿಜ್ಞಾನಿ ಡಾ.ಸುರೇಶ, ಕೃಷಿ ಕೀಟಶಾಸ್ತ್ರ ವಿಜ್ಞಾನಿ ಡಾ.ಕೃಷ್ಣ ಬಿರಾದಾರ ಪಾಟೀಲ್, ಕೃಷಿ ವಿಜ್ಞಾನಿಗಳಾದ ಡಾ.ಅಫ್ಸಾನಾ ಬಾನು, ಅಮರೇಶ, ಬಸವಲಿಂಗ ಸ್ವಾಮಿ, ಶಿವಪ್ಪ, ಚನ್ನಪ್ಪ ಇತರರಿದ್ದರು.