ಜಿಲ್ಲೆ

ಜೈನ, ಸನಾತನ ಧರ್ಮ ಪಾಲಿಸಿ ವ್ಯಸನಮುಕ್ತ ಜೀವನ ಸಾಗಿಸಿ

ಹುಬ್ಬಳ್ಳಿ : ಜೈನ ಮತ್ತು ಸನಾತನ ಧರ್ಮ ಪಾಲನೆ ಮಾಡುವ ಮೂಲಕ ವ್ಯಸನಮುಕ್ತ ಜೀವನ ನಡೆಸೋಣ ಎಂದು ರಾಜ್ಯಪಾಲ ಥಾವರ್​ಚಂದ್ ಗೆಹ್ಲೋತ್ ಹೇಳಿದರು.

ತಾಲೂಕಿನ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಆಯೋಜಿಸಿರುವ 61 ಅಡಿ ಎತ್ತರದ ಭಗವಾನ್ ಶ್ರೀ ಪಾರ್ಶ್ವನಾಥರ ಮಹಾಮಸ್ತಕಾಭಿಷೇಕ ಹಾಗೂ 405 ಅಡಿ ಎತ್ತರದ ಸುಮೇರು ಪರ್ವತ ಜಿನಬಿಂಬ ಪ್ರತಿಷ್ಠಾ ಪಂಚಕಲ್ಯಾಣ ಮಹಾಮಹೋತ್ಸವ ಸಮಾರಂಭಕ್ಕೆ ಬುಧವಾರ ಚಾಲನೆ ನೀಡಿ, ಅವರು ಮಾತನಾಡಿದರು.

ಪಂಚಕಲ್ಯಾಣ ಮಹೋತ್ಸವದಿಂದ ಧಮಾಚರಣೆ, ಮೋಕ್ಷಕ್ಕೆ ಪ್ರೇರಣೆ ಸಿಗುತ್ತದೆ. ತೀರ್ಥಂಕರರು ಮಾನವ ಕಲ್ಯಾಣದ ಸಂದೇಶ ನೀಡಿದ್ದಾರೆ. ಧಾರ್ವಿುಕ ಪರಂಪರೆ, ಆಚರಣೆ ಬೆಳೆಸುವಲ್ಲಿ ಋಷಿ ಮುನಿಗಳ ಪಾತ್ರ ದೊಡ್ಡದು. ಸತ್ಯ, ಅಹಿಂಸೆ, ಧರ್ಮ ಮಾರ್ಗದಲ್ಲಿ ನಡೆಯುವ ಮೂಲಕ ಜೈನ ಸಮಾಜ ಇತರರಿಗೆ ಮಾದರಿಯಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಪರಿಸರಕ್ಕೆ ಅತಿ ಹೆಚ್ಚು ಮಹತ್ವ ಇದೆ. ಇದೇ ಕಾರಣಕ್ಕೆ ಪರಿಸರ, ಪ್ರಾಣಿ, ಪ್ರಕೃತಿಯನ್ನು ಪೂಜಿಸಲಾಗುತ್ತಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಪರಿಸರ ಅಸಮತೋಲನವಾಗುತ್ತಿದೆ. ಜೈನ ಮತ್ತು ಸನಾತನ ಧರ್ಮದ ಸಿದ್ಧಾಂತಗಳನ್ನು ಪಾಲಿಸುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದು ತಿಳಿಸಿದರು.

ಉನ್ನತ ಶಿಕ್ಷಣ ಪಡೆದಿರುವ ಅನೇಕರು ವೈಭವದ ಜೀವನ ತೊರೆದು ಅಹಿಂಸೆ, ತಪದ ಬದುಕು ನಡೆಸುತ್ತಿದ್ದಾರೆ. ಜೈನ ಹಾಗೂ ಸನಾತನ ಧರ್ಮದ ಪ್ರಚಾರಕರಾಗಿದ್ದಾರೆ. ಸಾಮಾನ್ಯ ಮಾನವ ಎಂದಿಗೂ ಸಂತನಾಗಲು ಸಾಧ್ಯವಿಲ್ಲ. ಪೂರ್ವಜನ್ಮದಲ್ಲಿ ಪುಣ್ಯ ಮಾಡಿದವರಷ್ಟೇ ಸಂತರಾಗಲು ಸಾಧ್ಯ. ಆದರೆ, ಸಂತರ ಸಂಪರ್ಕಕ್ಕೆ ಬಂದು ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಸಾಮಾನ್ಯ ಮಾನವನೂ ಸಮಾಜಕ್ಕೆ ಮಾದರಿಯಾಗಲು ಸಾಧ್ಯ ಎಂದು ತಿಳಿಸಿದರು.

ತೀರ್ಥಂಕರರು ಹಾಕಿಕೊಟ್ಟ ಸತ್ಯ, ಅಹಿಂಸಾ, ಧರ್ಮ ಮಾರ್ಗದಲ್ಲಿ ನಡೆಯುವ ಮೂಲಕ ಎಲ್ಲ ಜೈನ ಮುನಿಗಳು ವಿಶ್ವ ಕಲ್ಯಾಣಕ್ಕಾಗಿ ಪ್ರಾರ್ಥಿಸುತ್ತಾರೆ. ತೀರ್ಥಂಕರರು ಮಾನವ ಕಲ್ಯಾಣಕ್ಕಾಗಿಯೇ ಜನಿಸಿದ ದೇವರಾಗಿದ್ದಾರೆ. ಬದುಕಿ, ಬದುಕಲು ಬಿಡಿ ಎಂಬ ಸಂದೇಶವನ್ನು ಮೊದಲು ನಾವು ಅರಿಯಬೇಕು. ಜಗತ್ತಿನ ಎಲ್ಲ ಜೀವರಾಶಿಗಳಿಗೂ ಬದುಕಲು ಹಕ್ಕಿದೆ. ನಮ್ಮಂತೆ ಅವುಗಳಿಗೂ ಸುಖಿ ಜೀವನ ನಡೆಸಲು ಅವಕಾಶ ಕಲ್ಪಿಸಿಕೊಡಬೇಕು ಎಂದರು.

ಧರ್ಮಸ್ಥಳದ ಧಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮಾತನಾಡಿ, ಶ್ರೀ ಗುಣಧರನಂದಿ ಸ್ವಾಮೀಜಿಗಳು ವರೂರು ನವಗ್ರಹ ಕ್ಷೇತ್ರದಲ್ಲಿ 405 ಅಡಿ ಎತ್ತರದ ಸುಮೇರು ಪರ್ವತವನ್ನು ಸ್ಥಾಪನೆ ಮಾಡಿದ್ದಾರೆ. ಇದು ವಿಶ್ವದಲ್ಲಿಯೇ ಅತಿ ಎತ್ತರದ ಸುಮೇರು ಪರ್ವತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ಇದಕ್ಕೂ ಮೊದಲು ಮಹಾಮಂಟಪ ಉದ್ಘಾಟಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ತಮ್ಮ ತಂದೆ ಬಿ.ಎಸ್. ಯಡಿಯೂರಪ್ಪ ಅವರ ಅಧಿಕಾರಾವಧಿಯಲ್ಲಿ ಶ್ರೀಕ್ಷೇತ್ರಕ್ಕೆ ಆರ್ಥಿಕ ನೆರವು ನೀಡಿದ್ದನ್ನು ಸ್ಮರಿಸಿದರು.

ಶಾಸಕರಾದ ಎಂ.ಆರ್. ಪಾಟೀಲ ಹಾಗೂ ಪ್ರಸಾದ ಅಬ್ಬಯ್ಯ ಮಾತನಾಡಿದರು. ಸುಮೇರು ಪರ್ವತ ನಿರ್ವಿುಸಿದ ಇಂಜಿನಿಯರ್ ವಿನೋಧ ಭಟ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಮಾರಂಭದ ಅಂಗವಾಗಿ ಬೆಳಗ್ಗೆ ಧರ್ಮ ಧ್ವಜಾರೋಹಣ, ನಂತರ ಮಹಾ ಮಂಟಪ ಉದ್ಘಾಟನಾ ಕಾರ್ಯಕ್ರಮ, ಮುನಿಶ್ರೀಗಳಿಂದ ಪೂಜಾ ವಿಧಿ ವಿಧಾನ ಕಾರ್ಯಕ್ರಮ ಹಾಗೂ ಮಹಾ ಮಂಡಳ ಆರಾಧನಾ ವಿಧಿ ವಿಧಾನ ಸಮಾರಂಭ ನಡೆದವು.

ಸುಮೇರು ಪರ್ವತ ವೀಕ್ಷಣೆ : ರಾಷ್ಟ್ರಸಂತ ಯುವಾಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಮಾತನಾಡಿ, ಕುತುಬ್ ಮಿನಾರ್ ವೀಕ್ಷಣೆಗೆ ಜನರು ದೆಹಲಿಗೆ ಹೋಗುತ್ತಿದ್ದರು. ಇದೀಗ, ವರೂರಿನಲ್ಲಿ ನಿರ್ವಿುಸಿರುವ 405 ಅಡಿ ಎತ್ತರದ ಸುಮೇರು ಪರ್ವತ ವೀಕ್ಷಣೆಗೆ ಉತ್ತರ ಭಾರತದ ಜನರು ಸಹ ಇಲ್ಲಿಗೆ ಬರಲಿದ್ದಾರೆ ಎಂದು ಹೇಳಿದರು.

ವರೂರು ಕ್ಷೇತ್ರದಲ್ಲಿ ಜಾತಿ ಭೇದ ಇಲ್ಲದೇ ಬಡ ಮಕ್ಕಳಿಗೆ ಉಚಿತವಾಗಿ ಉನ್ನತ ಶಿಕ್ಷಣ ನೀಡಲಾಗುತ್ತಿದೆ. ಬಡತನ ದೂರವಾಗಬೇಕಾದರೆ ಶಿಕ್ಷಣ ಅಗತ್ಯ ಎಂದರು.

ಪಂಚ ಕಲ್ಯಾಣ ಮಹಾಮಹೋತ್ಸವ ನಿಮಿತ್ತ ವರೂರು ಕ್ಷೇತ್ರದಲ್ಲಿ ಜ. 26ರವರೆಗೆ ವಿವಿಧ ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು.

ವಿಶ್ವದ ಅಚ್ಚರಿ : ಆಶೀರ್ವಚನ ನೀಡಿದ ಆಚಾರ್ಯ ಶ್ರೀ ಕುಂಥುಸಾಗರ ಮುನಿಮಹಾರಾಜರು, ನಮ್ಮ ಶಿಷ್ಯ ಆಚಾರ್ಯ ಶ್ರೀ ಗುಣಧರ ನಂದಿ ಮಹಾರಾಜರು ನವಗ್ರಹ ತೀರ್ಥ ಕ್ಷೇತ್ರ ಸ್ಥಾಪಿಸಿದ್ದಾರೆ. ಈಗ ಎತ್ತರದ ಸುಮೇರು ಪರ್ವತ ನಿರ್ವಿುಸಿದ್ದಾರೆ. ಇದು ವಿಶ್ವದ ಎರಡನೇ ಆಶ್ಚರ್ಯದ ಸ್ಥಳವಾಗಿದೆ. ಪರ್ವತದ ಒಳಗೆ ಹೋದಲ್ಲಿ ಮಹಾ ಪುರುಷರ ಜೀವನ ಚರಿತ್ರೆ, ಸಾಧನೆ ಹಾಗೂ ಭಾವಚಿತ್ರದ ಸಮೇತ ವಿವರಿಸಲಾಗಿದೆ ಎಂದರು.

ಉಪರಾಷ್ಟ್ರಪತಿ ಭೇಟಿ : ವರೂರು ನವಗ್ರಹ ತೀರ್ಥಕ್ಷೇತ್ರಕ್ಕೆ ಉಪ ರಾಷ್ಟ್ರಪತಿ ಜಗದೀಪ ಧನಕರ ಅವರು ಜ. 16ರಂದು ಮಧ್ಯಾಹ್ನ 3 ಗಂಟೆಗೆ ಭೇಟಿ ನೀಡಲಿದ್ದಾರೆ. ಇದಕ್ಕೂ ಮೊದಲು ವಿವಿಧ ಧಾರ್ವಿುಕ ಕಾರ್ಯಕ್ರಮಗಳು ನಡೆಯಲಿವೆ.

ಆಚಾರ್ಯ ಶ್ರೀ ಕೀರ್ತಿಸಾಗರ ಮಹಾರಾಜರು, ಆಚಾರ್ಯ ಶ್ರೀ ಗುಣಭದ್ರ ಮಹಾರಾಜರು, ಆಚಾರ್ಯ ಶ್ರೀ ವಿಮಲೇಶ್ವರಮುನಿ ಮಹಾರಾಜರು, ಆಚಾರ್ಯ ಶ್ರೀ ದೇವನಂದಿ ಮಹಾರಾಜರು, ಶ್ರೀ ಧರ್ಮಸೇನ ಭಟ್ಟಾರಕ ಸ್ವಾಮೀಜಿ, ಮಾಜಿ ಶಾಸಕ ಸಂಜಯ ಪಾಟೀಲ, ಪ್ರಮುಖರಾದ ಮಹೇಂದ್ರ ಸಿಂಘಿ, ವಿಮಲ ತಾಳಿಕೋಟಿ ಹಾಗೂ ಇತರರು ಇದ್ದರು.