ಜಿಲ್ಲೆ

ರಾಜ್ಯೋತ್ಸವ ಆಚರಣೆಯಲ್ಲಿ ಶಿಷ್ಟಾಚಾರ ಪಾಲನೆ ಮಾಡಿ

ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ಸಮೃದ್ಧಿ ವಿ.ಮಂಜುನಾಥ್​ ಸಲಹೆ

ಮುಳಬಾಗಿಲು: ನ.01 ರಂದು ಕರ್ನಾಟಕ ರಾಜ್ಯೋತ್ಸವವನ್ನು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸರ್ಕಾರದ ಶಿಷ್ಟಾಚಾರದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಆಚರಿಸಿ ಕನ್ನಡದ ಅಸ್ಮಿತೆಯನ್ನು ತೋರಿಸಬೇಕು ಎಂದು ಶಾಸಕ ಸಮೃದ್ಧಿ ವಿ.ಮಂಜುನಾಥ್​ ತಿಳಿಸಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ,ರಾಜ್ಯಮಟ್ಟದ ಖ್ಯಾತ ಕಲಾವಿದರಿಂದ ಅದ್ದೂರಿ ಕಾರ್ಯಕ್ರಮದ ಮೂಲಕ ಕನ್ನಡ ಸಂಭ್ರಮೋತ್ಸವ ಅಚ್ಚುಕಟ್ಟಾಗಿ ನೆರವೇರಿಸಲು ತಾಲೂಕಿನ ಕನ್ನಡಿಗರೆಲ್ಲರೂ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಮಳೆ ನಿಂತ ನಂತರ ನ.-16 ರಂದು ನೇತಾಜಿ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಅದ್ದೂರಿ ಆಚರಣೆ ಮಾಡುವ ಮೂಲಕ ಜಿಲ್ಲೆಯಲ್ಲಿ ಮೂಡಲ ಬಾಗಿಲು ಮಾದರಿಯಾಗಬೇಕು. ಅದಕ್ಕೆ ಎಲ್ಲ ಕನ್ನಡಪರ ಮನಸುಗಳು ಸಂಘ&ಸಂಸ್ಥೆಗಳ ಪದಾಧಿಕಾರಿಗಳು ಸಹಕರಿಸಬೇಕು ಎಂದರು.

ಡಿವಿಜಿ ಗಡಿ ಕನ್ನಡ ಭವನ ಕಾಮಗಾರಿ ಪೂರ್ಣಗೊಂಡಿದ್ದು, ಹವಾನಿಯಂತ್ರಿತ ವ್ಯವಸ್ಥೆ ಮಾಡಬೇಕಾಗಿದೆ. ಭವನ ಪುನರ್​ ಲೋಕಾರ್ಪಣೆ ನಂತರ ಹೆಚ್ಚಿನ ಕನ್ನಡ ಕಾರ್ಯಕ್ರಮಗಳು ಪ್ರತಿ ತಿಂಗಳು ನಡೆಯುವಂತಾಗಲಿ, ಭವನದ ಮುಂಭಾಗದಲ್ಲಿ ಮುಳಬಾಗಿಲಿನ ಹೆಮ್ಮೆಯ ಪುತ್ರ ನಮ್ಮೂರ ಅಜ್ಜ ಡಿವಿಜಿ ಅವರ ಪ್ರತಿಮೆ ನಿಮಾರ್ಣಕ್ಕೆ ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಿ ತೀಮಾರ್ನ ಕೈಗೊಳ್ಳಲಾಗುವುದು. ಜತೆಗೆ ತಾತಿಪಾಳ್ಯ ವೃತ್ತದಲ್ಲಿ ನಿಮಾರ್ಣ ಮಾಡಿರುವ ಮತ್ತೊಂದು ಪ್ರತಿಮೆಯ ವಿವಾದ ನ್ಯಾಯಾಲಯದಲ್ಲಿದ್ದು, ಅದನ್ನು ಸೌಹಾರ್ದಯುತವಾಗಿ ಬಗೆಹರಿಸಲಾಗುವುದು ಎಂದರು.

ತಾಪಂ ಮಾಜಿ ಅಧ್ಯಕ್ಷ ಎಂ.ಎಸ್​.ಶ್ರೀನಿವಾಸರೆಡ್ಡಿ ಮಾತನಾಡಿ, ಮುಳಬಾಗಿಲು ಗಡಿನಾಡಲ್ಲ ಕನ್ನಡ ನಾಡು ಎಂಬುದನ್ನು ಇಡೀ ರಾಜ್ಯಕ್ಕೆ ತೋರಿಸುವ ಮೂಲಕ ವಿಶ್ವದಲ್ಲಿರುವ ಎಲ್ಲ ಕನ್ನಡಿಗರು ಮುಳಬಾಗಿಲಿನ ಕಾರ್ಯಕ್ರಮ ನೋಡುವಂತೆ ಮಾಡಬೇಕಾಗಿದೆ ಎಂದರು.

ಕನ್ನಡ ಸಂಘದ ತಾಲೂಕು ಕಾರ್ಯದರ್ಶಿ ಎಂ.ವಿ.ಜನಾರ್ದನ್​, ನಗರಸಭೆ ಪೌರಾಯುಕ್ತ ವಿ.ಶ್ರೀಧರ್​, ತಾಪಂ ಸಹಾಯಕ ನಿರ್ದೇಶಕರಾದ ರವಿಚಂದ್ರ, ಆನಂದ್​, ಡಾ.ಅನುರಾಧಾ, ಬಿಇಒ ಕೆ.ಎನ್​.ರಾಮಚಂದ್ರಪ್ಪ, ಬೆಸ್ಕಾಂ ಎಇಇ ವಿ.ಎಂ.ರಮೇಶ್​, ತಾಲೂಕು ಬ್ರಾಹ್ಮಣರ ಸಂಘದ ಅಧ್ಯಕ್ಷ ಬಲ್ಲಂ ಶ್ರೀನಿವಾಸ್​, ಮಾಜಿ ಅಧ್ಯಕ್ಷ ಎಚ್​.ಎಸ್​. ಹರೀಶ್​, ಡಿಸಿಸಿ ಬ್ಯಾಂಕ್​ ನಿರ್ದೇಶಕ ರಘುಪತಿ ರೆಡ್ಡಿ, ಮುಖಂಡರಾದ ಕೆ. ಮಧುಸೂದನ್​, ಹರೀಶ್​ಗೌಡ, ವಿಟ್ಟಹಳ್ಳಿ ಪ್ರಕಾಶ್​, ಹುಸೇನ್​, ವಿ.ಜಯಪ್ಪ, ಸಿ.ಮೋಹನ್​, ಚೋಳನಗುಂಟೆ ಹರೀಶ್​, ಪಿ.ಎಸ್​.ವೆಂಕಟೇಶ್​, ವರದಗಾನಹಳ್ಳಿ ಮುನಿವೆಂಕಟಪ್ಪ ಇದ್ದರು.