ಕನಕಗಿರಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಜನಪದ ಉತ್ಸವವನ್ನು ಕಲಾಶ್ರೀ ಪ್ರಶಸ್ತಿ ಪುರಸ್ಕೃತ ವಿರೂಪಾಕ್ಷ ರೆಡ್ಡಿ ಓಣಿಮನಿ ಉದ್ಘಾಟಿಸಿದರು. ಪ್ರಾಧ್ಯಾಪಕರಾದ ಮರ್ವಿನ್ ಡಿಸೋಜ, ಎಚ್.ಸಿ.ಆಶಿಕಾ, ಟಿ.ಆರ್.ಸರ್ವಮಂಗಳಮ್ಮ, ಎನ್.ರಕ್ಷಿತ್, ಉಪನ್ಯಾಸಕರಾದ ಗೋಪಾಲ ರೆಡ್ಡಿ, ಸೋಮಶೇಖರ್ ಇತರರಿದ್ದರು. 
ಜಿಲ್ಲೆ

ಪ್ರಾದೇಶಿಕ ಸೊಗಡು ಉಳಿಸಿದ ಜನಪದ

ಕನಕಗಿರಿ: ಪಾಶ್ಚಾತ್ಯ ಶೈಲಿ ಸಂಗೀತದ ಪ್ರಭಾವಕ್ಕೆ ಜನಪದ ಗೀತೆಗಳು ವೈಭವವನ್ನು ಕಳೆದುಕೊಂಡಿವೆ ಎಂದು ವಿಶ್ರಾಂತ ಪ್ರಾಧ್ಯಾಪಕ ಹಾಗೂ ರಂಗಭೂಮಿ ಕಲಾವಿದ ಡಾ.ಎಚ್.ಎಂ.ಶಾಸ್ತ್ರಿ ಹೇಳಿದರು.

ನಗರದ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ಘಟಕದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಜನಪದ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕರ್ನಾಟಕ ಜನಪದ ಸಂಸ್ಕೃತಿ ಉನ್ನತ ಸ್ಥಾನದಲ್ಲಿದೆ. ಜನಪದ ಜ್ಞಾನ ಪರಂಪರೆಯಿಂದ ಬಂದದ್ದು, ಜನಪದ ಸಂಸ್ಕೃತಿ ಭಾಗವಾದ ಜನಪದ ಗೀತೆಗಳು ವೈವಿಧ್ಯಮಯವಾಗಿವೆ. ಕನ್ನಡನಾಡಿನ ವಿವಿಧ ಪ್ರಾದೇಶಿಕ ಸೊಗಡನ್ನು ಮುಂದಿನ ಪೀಳಿಗೆಗೆ ಜೋಪಾನ ಮಾಡಿವೆ. ಜನಪದ ತನ್ನದೇ ಆವರಣದಲ್ಲಿ ಮೌಖಿಕ ಸಂಪ್ರದಾಯವನ್ನು ಅನುಸರಿಸಿ ತಲೆಮಾರಿನಿಂದ ಸಾಗಿ ಬಂದಿದೆ ಎಂದರು.

ಕನ್ನಡ ಭಾಷಾ ಸಹಾಯಕ ಪ್ರಾಧ್ಯಾಪಕಿ ಎನ್.ಲಲಿತಾ ಕಿನ್ನಾಳ ಮಾತನಾಡಿ, ಜನಪದವು ಕಲೆ ಮತ್ತು ಸಂಸ್ಕೃತಿಯಾಗಿದೆ. ಜನಪದ ಗ್ರಾಮೀಣ ಜನರ ಉಸಿರಾಗಿದ್ದು, ಹಿರಿಯರು ಬೇಸರ ಕಳೆಯಲು ಜನಪದ ಗೀತೆಗಳನ್ನು ಹಾಡುತ್ತಿದ್ದರು. ಶುದ್ಧ ಧರ್ಮ ಹಾಗೂ ಸಂಸ್ಕೃತಿಯನ್ನು ಜನಪದ ಮೂಲಕ ಅಳವಡಿಸಿಕೊಳ್ಳಬಹುದು. ಬದುಕು ಬದಲಾಯಿಸಲು ಜನಪದ ಮಾದರಿಯಾಗಿದೆ ಎಂದು ತಿಳಿಸಿದರು.

ಅದ್ದೂರಿ ಮೆರವಣಿಗೆ: ಜನಪದ ಉತ್ಸವ ಹಿನ್ನೆಲೆಯಲ್ಲಿ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಗ್ರಾಮೀಣ ಜನಪದ ಶೈಲಿ ಉಡುಗೆತೊಟ್ಟು ಎತ್ತಿನ ಗಾಡಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಜನಪದ ವಾದ್ಯಮೆಳದೊಂದಿಗೆ ಕುಣಿದು ಕುಪ್ಪಳಿಸಿದರು. ಕೆಲ ವಿದ್ಯಾರ್ಥಿಗಳು ಲಂಬಾಣಿ ವೇಷದಲ್ಲಿ ಮಿಂಚಿದರು.

ಪ್ರಾಚಾರ್ಯ ಬಜರಂಗ ಬಲಿ, ಪ್ರಾಧ್ಯಾಪಕರಾದ ಮರ್ವಿನ್ ಡಿಸೋಜ, ಎಚ್.ಸಿ.ಆಶಿಕಾ, ಟಿ.ಆರ್.ಸರ್ವಮಂಗಳಮ್ಮ, ಎನ್.ರಕ್ಷಿತ್, ಉಪನ್ಯಾಸಕರಾದ ಗೋಪಾಲ ರೆಡ್ಡಿ, ಸೋಮಶೇಖರ್, ಮಾರುತೇಶ, ರವಿಕುಮಾರ, ದೇವೇಂದ್ರಪ್ಪ, ಮಂಜುನಾಥ, ಎಸ್.ಕೆ.ಖಾದ್ರಿ, ಮಾದಿನಾಳಪ್ಪ, ವೀರೇಶ, ಪ್ರಿಯಾಂಕಾ, ಮಾಲತಿ, ಶಾಂತಾ ಇತರರಿದ್ದರು.