ಜಿಲ್ಲೆ

ವಿಭಿನ್ನ ರೀತಿಯಲ್ಲಿ ಆಗಲಿ ಜಾನಪದ ಸಂಶೋಧನೆ

ಬಸವರಾಜ ವೀರಪ್ಪ ಗರಗ

ಶಿಗ್ಗಾಂವಿ: ಜಾಗತೀಕರಣದಿಂದಾಗಿ ಕೃಷಿಯ ಮೇಲೆ ನಮ್ಮ ನಿಯಂತ್ರಣ ತಪ್ಪುತ್ತಿದೆ. ನಮ್ಮದು ಬಹುಸಂಸ್ಕೃತಿಯ ದೇಶಿ ಜಾನಪದವು ಸಾಮಾಜಿಕವಾದ ಮೂಲ ವಿಜ್ಞಾನವಾಗಿದೆ. ಎಲ್ಲದಕ್ಕೂ ಜ್ಞಾನ ಶಾಖೆಯಾಗಿದ್ದು, ಇಲ್ಲಿ ಜಾನಪದ ಸಂಶೋಧನೆ ವಿಭಿನ್ನ ರೀತಿಯಲ್ಲಿ ಆಗಬೇಕು ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಹೇಳಿದರು.

ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆದಂಡೆ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪಿಎಚ್.ಡಿ ಕೋರ್ಸ್ ವರ್ಕ್ ಕಮ್ಮಟ-2025ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಜನಪದ ಕಲೆಗಳನ್ನು ರಂಗು-ರಂಗಾಗಿ ತೋರಿಸುವುದು ಜಾನಪದವಲ್ಲ. ಜಾನಪದ ಜ್ಞಾನ ಭೂಮಿ ತೂಕದ್ದು, ಆಕಾಶದಷ್ಟು ಅಗಲವಾದದ್ದು, ದೇಶಿಯ ನೆಲೆಯಲ್ಲಿ ಆಲೋಚನೆ ಮಾಡುವ ಸಂಶೋಧನಾ ಪ್ರವೃತ್ತಿ ಇರುವವರು ಈ ಕ್ಷೇತ್ರಕ್ಕೆ ಬಂದಾಗ ಉತ್ತಮ ಸಂಶೋಧನೆಗಳಾಗಲಿವೆ. ದೇಶಿ ಚಿಂತನೆ ರೂಪಿಸುವ ಅಗತ್ಯವಿದೆ. ಇಲ್ಲಿ ಗುಣಮಟ್ಟದ, ವೃತ್ತಿಪರತೆ ಹಾಗೂ ಶೈಕ್ಷಣಿಕ ಶಿಸ್ತುಬದ್ಧ ಸಂಶೋಧನೆಗಳಾಗಬೇಕು ಎಂದರು.

ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಕೇಂದ್ರೀಕರಿಸುವುದು ಜಾನಪದ ವಿಶ್ವವಿದ್ಯಾಲಯದ ಮುಖ್ಯ ಗುರಿಯಾಗಿದೆ. ಇದು ಬೇರೆ ವಿಶ್ವವಿದ್ಯಾಲಯಗಳಂತಲ್ಲ. ಇಲ್ಲಿ ಸಮುದಾಯ ಜ್ಞಾನ, ಅಧ್ಯಯನ, ಕಲೆಗಳ ಕಲಿಕೆ ಮತ್ತು ಪ್ರಾತ್ಯಕ್ಷಿಕೆಗೆ ಅತ್ಯಂತ ವೈಜ್ಞಾನಿಕ ಹಿನ್ನೆಲೆಯಲ್ಲಿ ವಿವಿ ಆರಂಭವಾಗಿದೆ ಎಂದು ವಿಶ್ವವಿದ್ಯಾಲಯದ ರೂಪುರೇಷೆಗಳ ಕುರಿತು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ್ ಹಾಗೂ ಕುಲಸಚಿವ ಪ್ರೊ.ಸಿ.ಟಿ. ಗುರುಪ್ರಸಾದ ಮಾತನಾಡಿದರು.

ಸಹಾಯಕ ಕುಲಸಚಿವ, ಪಿಎಚ್.ಡಿ ಕೋರ್ಸ್ ವರ್ಕ್ ಸಂಚಾಲಕ ಶಹಜಹಾನ್ ಮುದಕವಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಉತ್ತರೋತ್ತರವಾಗಿ ಅಭಿವೃದ್ಧಿ ಹೊಂದುತ್ತಿರುವ ವಿಶ್ವವಿದ್ಯಾಲಯಕ್ಕೆ ಮುಂದಿನ ದಿನಮಾನಗಳಲ್ಲಿ ಉತ್ತಮ ಭವಿಷ್ಯವಿದೆ’ ಎಂದರು.

ಕೆ.ಎನ್. ಕೃಷ್ಣಾ, ಇಂದಿರಾ ಹೊಳ್ಕರ್, ರಂಗನಾಥ ಕುಲಕರ್ಣಿ ಕಮ್ಮಟದ ಕುರಿತು ಅಭಿಪ್ರಾಯ ಹಂಚಿಕೊಂಡರು.

ಸಂಶೋಧನಾರ್ಥಿಗಳಾದ ಅನಿತಾ ಟಿ.ಎಸ್. ಹಾಗೂ ಜಯಶ್ರೀ ಪಾಟೀಲ ಕವನ ವಾಚನ ಮಾಡಿದರು.

ಸಹಾಯಕ ಸಂಶೋಧನಾಧಿಕಾರಿ ಡಾ.ಮಲ್ಲಿಕಾರ್ಜುನ ಮಾನ್ಪಡೆ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ.ಗಿರೇಗೌಡ ಅರಳಿಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು.