ಅರಸೀಕೆರೆ: ತಾಲೂಕಿನ ಅಗ್ಗುಂದ ಗ್ರಾಮದಲ್ಲಿ ಹಾಸನ ಆಕಾಶವಾಣಿ ಕೇಂದ್ರದ ವತಿಯಿಂದ ಗುರುವಾರ ಹಳ್ಳಿಧ್ವನಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾಧಿಕಾರಿ ಸತ್ಯಭಾಮಾ ಪಾಲ್ಗೊಂಡು ಮಾತನಾಡಿ, ಗ್ರಾಮೀಣ ಜನರ ಸಂಕಷ್ಟಗಳನ್ನು ತಿಳಿಯಲು ಆಕಾಶವಾಣಿಯಿಂದ ಮಾದರಿ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಇದರಿಂದ ಸ್ಥಳದಲ್ಲಿಯೇ ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಿದೆ. ಜತೆಗೆ ಹಳ್ಳಿಯ ಹಿನ್ನೆಲೆ, ಕೃಷಿ, ಸಾಮಾಜಿಕ ಬದುಕು, ಸಂಘ-ಸಂಸ್ಥೆಗಳ ಕಾರ್ಯವೈಖರಿ, ದೇಗುಲ, ಕಲಾವಿದರ ಕೊಡುಗೆ ತಿಳಿದುಕೊಳ್ಳಲು ಅವಕಾಶ ದೊರೆಯುತ್ತದೆ ಎಂದರು.
ಕರಡಿ ದಾಳಿ ತಡೆಗಟ್ಟುವುದು, ಅಗ್ಗುಂದ ಗ್ರಾಮಕ್ಕೆ ಅಗತ್ಯವಿರುವ ಚರಂಡಿ, ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ, ವಿದ್ಯುತ್, ಇ-ಸ್ವತ್ತು, ಕುಡಿಯುವ ನೀರು, ಅನೈರ್ಮಲ್ಯ ಪರಿಹಾರ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಎಲ್ಲ ಸಮಸ್ಯೆಗಳನ್ನು ನಿಗದಿತ ಕಾಲಮಿತಿಯಲ್ಲಿ ಪರಿಹಸಿರುವಂತೆ ಪಿಡಿಒ ಮಂಜುಳಾ ಅವರಿಗೆ ಡಿಸಿ ಸತ್ಯಭಾಮಾ ಸೂಚಿಸಿದರು.
ಕಾರ್ಯಕ್ರಮದ ಮುಖ್ಯಸ್ಥ ವಿಜಯ್ ಅಂಗಡಿ ಮಾತನಾಡಿ, ಗ್ರಾಮೀಣ ಜನರ ಉದ್ಧಾರದಿಂದ ಮಾತ್ರವೇ ದೇಶದ ಅಭಿವೃದ್ಧಿ ಸಾಧ್ಯವೆಂಬುದಾಗಿ ಮಹಾತ್ಮಾ ಗಾಂಧೀಜಿ ಹೇಳಿದ್ದಾರೆ. ಇದನ್ನು ಮನಗಂಡು ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಹಾಸನ ಅಕಾಶವಾಣಿ ಕೇಂದ್ರದ ವತಿಯಿಂದ ಹಳ್ಳಿಧ್ವನಿ ವಿನೂತನ ಕಾರ್ಯಕ್ರಮ ರೂಪಿಸಿದ್ದೇವೆ. ಜನ ಹಾಗೂ ಜಾನುವಾರುಗಳ ಉಚಿತ ಆರೋಗ್ಯ ತಪಾಸಣೆ, ಪರಿಸರ ಕಾಳಜಿ ಸೇರಿದಂತೆ ಹಲವು ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ಇಬ್ಬರು ಪ್ರಗತಿಪರ ರೈತರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕವಿತಾ ಮಲ್ಲಿಕಾರ್ಜುನ್, ಡಾ.ಹರೀಶ್ ಕುಮಾರ್, ಶೇಖರಣ್ಣ, ಮಧುಸೂದನ್, ಚಂದ್ರಯ್ಯ ಇದ್ದರು.