ಜಿಲ್ಲೆ

ಜನಪದ ಸಾಹಿತ್ಯಕ್ಕೆ ಆಧುನಿಕ ಜೀವನ ಶೈಲಿ ಮಾರಕ

Davangere - Desk - Shobha Krishna Gowda

ಹರಿಹರ: ಜನಪದ ಸಾಹಿತ್ಯ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಜತೆಗೆ ಲೋಕ ಜ್ಞಾನವನ್ನು ನೀಡುತ್ತದೆ. ಆದರೆ ಆಧುನಿಕ ಜೀವನ ಶೈಲಿ ಇದನ್ನು ನಾಶ ಮಾಡುತ್ತಿದೆ ಎಂದು ಜಾನಪದ ವಿದ್ವಾಂಸ ಡಾ.ಕೆ.ಸಿ. ನಾಗರಜ್ಜಿ ಕಳವಳ ವ್ಯಕ್ತಪಡಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಜಾನಪದ ಉತ್ಸವದ ಅಂಗವಾಗಿ ಆಯೋಜಿಸಿದ್ದ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹುಟ್ಟಿದ ಕೂಸಿಗೆ ಜೋಗುಳ ಕೇಳಿಸುವ ಮೂಲಕ ಆರಂಭವಾಗುವ ನಮ್ಮ ಜನಪದ ಸಾಹಿತ್ಯ, ಕ್ರಮೇಣ ಲೋಕ ಜ್ಞಾನವನ್ನೂ ನೀಡುತ್ತದೆ. ಆಧುನಿಕ ಬದುಕು ಜನಪದ ಸಾಹಿತ್ಯದಲ್ಲಿನ ಸತ್ವವನ್ನು ಕಬಳಿಸುತ್ತಿದ್ದು, ಎದೆ ಹಾಲಿನ ಜಾಗಕ್ಕೆ ಬಾಟಲಿ ಹಾಲು ಆಕ್ರಮಿಸಿಕೊಂಡಿದೆ ಎಂದರು.

ಹೆಣ್ಣು ಮಾಡುವ ಕೆಲಸ ಬಾಳ್ವೆಯಾದರೆ, ಗಂಡು ಮಾಡುವ ಕಾರ್ಯ ಬದುಕಾಗಿದೆ. ಹೀಗೆ ಗ್ರಾಮೀಣರು ಬಾಳ್ವೆ ಬದುಕಿನ ಸಮ್ಮಿಲನದಿಂದ ಸಾಮರಸ್ಯದ ಹಾಗೂ ನೆಮ್ಮದಿಯ ಬದುಕನ್ನು ಕಳೆಯುತ್ತಿದ್ದರು ಎಂದು ನಗರಗಳ ಆಧುನಿಕ ಬದುಕಿನ ಬವಣೆಯನ್ನು ವಿವರಿಸಿದರು.

ಜನಪದರ ಬದುಕು ಸುಸ್ಥಿರ ಮತ್ತು ಆರೋಗ್ಯಕರವಾದುದ್ದಾಗಿದೆ. ನಮ್ಮ ನೆಲ ಮೂಲದ ಜನಪದರ ಜ್ಞಾನ ಜಗತ್ತಿನ ಜನರನ್ನು ಸೆಳೆಯುತ್ತಿದೆ. ವೈಜ್ಞಾನಿಕವಾಗಿರುವ ಊಟ- ಉಪಚಾರ, ಉಡುಗೆ- ತೊಡುಗೆ, ಶ್ರಮ- ಸಂಸ್ಕೃತಿ, ಜೀವನ ಕ್ರಮ, ಆಚರಣೆ, ಆಚಾರ- ವಿಚಾರಗಳು ಹೀಗೆ ನಮ್ಮ ಗ್ರಾಮೀಣರ ಬದುಕು ಸ್ವಸ್ಥವಾದ ಕ್ರಮವಾಗಿದೆ ಎಂದು ಭಾರತೀಯ ವೈವಿಧ್ಯ ಜೀವನ ಕ್ರಮವನ್ನು ಶ್ಲಾಘಿಸಿದರು.

ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎನ್. ರಮೇಶ್ ಮಾತನಾಡಿ, ದೇಶಿಯ ಸಂಸ್ಕೃತಿಯು ಮರೆಯಾಗದಂತೆ ಇಂದಿನ ಪೀಳಿಗೆಗೆ ಪರಿಚಯಿಸುವ ಹಾಗೂ ಪ್ರತಿಬಿಂಬಿಸುವ ಮೂಲ ಉದ್ದೇಶದೊಂದಿಗೆ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ನಮ್ಮ ಸಂಸ್ಕೃತಿಯು ಕೃಷಿ ಪದ್ಧತಿಯಿಂದ ಉಗಮವಾಗಿದ್ದು. ಜಾನಪದದ ಮೂಲ ಬೇರುಗಳು ಇರುವುದು ಬೇಸಾಯ ಸಂಸ್ಕೃತಿಯಲ್ಲಿ. ಆಧುನಿಕತೆ ಎಷ್ಟೇ ಬೆಳೆದರೂ ಕೃಷಿ ಅತ್ಯವಶ್ಯಕವಾದ ಕಸುಬು. ಆ ಮೂಲಕ ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿ ಪರಂಪರೆಗಳು ರೂಪುತಾಳಿದ್ದು, ಅವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

ಐಕ್ಯೂಎಸ್​ಸಿ ಸಂಯೋಜಕರಾದ ಡಾ.ಎಚ್.ಪಿ ಅನಂತನಾಗ್ ಮಾತನಾಡಿ, ಜನಪದ ಕಥೆಗಳು ಮನುಷ್ಯನ ನೆಮ್ಮದಿ ಮತ್ತು ವೈಚಾರಿಕ ಚಿಂತನೆಗಳ ಜತೆ ನಿರಂತರವಾಗಿವೆ. ಜಾನಪದ ಯಾವಾಗಲೂ ಜೀವಂತವಾಗಿ ಇರುವಂತದ್ದು. ಆಧುನಿಕತೆ ನಮ್ಮತನವನ್ನು ಮರೆಮಾಚುತ್ತಿದೆ. ಇದೆಲ್ಲದರ ನಡುವೆ ಮಾನವೀಯ ಗುಣಗಳನ್ನು ಬೆಳೆಸಿಕೊಂಡು, ಉತ್ತಮ ನಾಗರಿಕರಾಗಿ ಬದುಕಬೇಕು ಎಂದು ಹೇಳಿದರು.

ಕಾಲೇಜಿನ ಎಲ್ಲ ವಿಭಾಗದ ವಿದ್ಯಾರ್ಥಿಗಳ ಜನಪದ ಉಡುಗೆ, ಡೊಳ್ಳು ಕುಣಿತ, ಎತ್ತಿನಗಾಡಿ ಮೆರವಣಿಗೆ ಮೂಲಕ ಸಂಭ್ರಮಿಸಿದರು. ಜನಪದ ಶೈಲಿಯ ಆಹಾರ, ಪಾನೀಯಗಳು, ಕೃಷಿ ಚಟುವಟಿಕೆಯ ಕಣ (ಪೈರಿನ ರಾಶಿ), ಗ್ರಾಮೀಣ ಪ್ರದೇಶದ ಯುಗಾದಿ ಹಬ್ಬದ ಆಚರಣೆಯ ಪ್ರದರ್ಶನಗಳನ್ನು ಮಾಡಲಾಯಿತು. ಜನಪದ ನೃತ್ಯ, ಜನಪದ ಉಡುಗೆಯ ರ್ಯಾಂಪ್​ವಾಕ್​ನಂತಹ ಮನರಂಜನಾ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು.

ವಿದ್ಯಾರ್ಥಿನಿ ಎನ್.ಎಚ್. ಅರ್ಪಿತಾ ಪ್ರಾರ್ಥಿಸಿದರು. ಸಾಂಸ್ಕೃತಿಕ ಸಮಿತಿಯ ಸಂಚಾಲಕ ಡಾ.ಎಂ. ಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಚ್. ತಿಪ್ಪೇಸ್ವಾಮಿ ಸ್ವಾಗತಿಸಿದರು. ಎ. ರಾಜಪ್ಪ ನಿರೂಪಿಸಿದರು. ಅಧ್ಯಾಪಕ ಸಂಘದ ಕಾರ್ಯದರ್ಶಿ ಡಾ.ಬಿ.ಕೆ. ಮಂಜುನಾಥ್ ವಂದಿಸಿದರು.