ಬಿಡದಿ: ಜನಪದರು ಜೀವಪರವಾಗಿದ್ದರು, ಅವರು ಎಂದಿಗೂ ಸಮಾಜದಲ್ಲಿ ಮನುಷ್ಯ ಮನುಷ್ಯನ ನಡುವೆ ಹೊಡೆದಾಡುವ ಸನ್ನಿವೇಶವನ್ನು ಸೃಷ್ಟಿಸಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಯುದ್ಧೋತ್ಸಾಹ ಹೆಚ್ಚಾಗಿ, ಮಾನವೀಯತೆ ಕಾಣೆಯಾಗಿ, ತಾರತಮ್ಯ ಭಾವನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಜಾನಪದ ವಿದ್ವಾಂಸ ಪ್ರೊ. ವ.ನಂ.ಶಿವರಾಮು ತಿಳಿಸಿದರು.
ಬಿಡದಿ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಟ್ರಸ್ಟ್ ಹಾಗೂ ಬಿಡದಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತವಾಗಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿಜ್ಞಾನ, ತಂತ್ರಜ್ಞಾನ ಬದುಕಿನ ವಿವಿಧ ರಂಗಗಳಲ್ಲಿ ಹೇಗೆ ಜಾನಪದ ಬಿಡದೆ ಹೊಂದಿಕೊಂಡಿದೆ ಎಂಬುದನ್ನು ಎಳೆಎಳೆಯಾಗಿ ಬಿಡಿಸಿಟ್ಟರು.
ಶ್ರಮ ಸಂಸ್ಕೃತಿಯ ಮೂಲದಿಂದ ಹುಟ್ಟಿರುವ ಜನಪದ ಕಲೆಗಳಿಗೆ ಈಗಲೂ ಬೇಡಿಕೆ ಹೆಚ್ಚಾಗುತ್ತಿದೆ. ಮಾನವನ ನಾಗರಿಕತೆ ಜೀವನಕ್ಕಿಂತಲೂ ಮುಂಚಿತವಾಗಿ ಶ್ರಮ ಶಕ್ತಿ ಮುಖ್ಯವಾಗಿದ್ದು, ಶ್ರಮದ ದಣಿವಿನ ನಿವಾರಣೆಗಾಗಿ ಹುಟ್ಟಿಕೊಂಡ ಹಾಡು, ಕುಣಿತ ಹಾಗೂ ವಾದ್ಯ ಸಂಗೀತ ಕಲೆಗಳು ಇಂದು ಜನಪದ ಕಲಾ ಪ್ರಕಾರಗಳಾಗಿ ಪ್ರದರ್ಶಿಸಲ್ಪಡುತ್ತಿವೆ ಎಂದು ತಿಳಿಸಿದರು.
ಜಾನಪದ ವಿದ್ವಾಂಸ ಡಾ. ಎಂ.ಬೈರೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ ಆರುದ್ದ ಮಂಡೇಯ ಮಾರುದ್ದ ಸೆಳೆಗಂಟು ಆ ಮಂಡೆ ಮಾಸಿ ಇರಲಾರೆ, ಆ ಮಂಡೇ ಮಾಸಿ ಇರಲಾರೆ ಅಪ್ಪಯ್ಯ ಗಾಣಗಿತ್ತಿ ಬೇಕು ಮನೆಯೊಳಗೆ ಈ ಗರತಿ ಹಾಡಿನ ತ್ರಿಪದಿ ಯಲ್ಲಿ ಅಡಗಿರುವ ಬದುಕಿನ ಸೂತ್ರಗಳನ್ನು ವಿವರಿಸಿದರು. ಹಾಗೇ ಸ್ಥಳೀಯತ ವಿವರಗಳಾದ ವಂಶ, ಊರು, ತಮ್ಮ ಸುತ್ತಮುತ್ತಲ ಬೆಟ್ಟ ಗುಡ್ಡ ನದಿ ಕಣಿವೆಗಳಿಗೆ ಹೆಸರು ಬಂದ ವಿವರಗಳನ್ನು ದಾಖಲಿಸಬೇಕಾದ ಅನಿವಾರ್ಯತೆಯನ್ನು ವಿವರಿಸಿದರು.
ರಾಜ್ಯ ಯುವ ಸಂಘ ಸಂಸ್ಥೆಗಳ ಒಕ್ಕೂಟದ ಕಾರ್ಯದರ್ಶಿ ಫಣೀಂದ್ರ ಪ್ರಸಾದ್ ಮಾತನಾಡಿ ಯುವ ಸಮುದಾಯವಿರುವ ಕಾಲೇಜುಗಳಲ್ಲಿ ಜಾನಪದದ ಬೀಜಗಳನ್ನು ಬಿತ್ತುವುದರಿಂದ ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಅನುಕೂಲವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಪೂಜಾ ಕುಣಿತದ ಕಲಾವಿದ ಪಾರ್ಥ ಸಾರಥಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಚನ್ನೇಗೌಡ, ಸಮಾಜ ಸೇವಕ ದೊರೆಸ್ವಾಮಿ, ಹೋಟೆಲ್ ಮಾಲೀಕ ಎನ್.ವಿ.ದಿನೇಶ್, ಪುರಸಭೆ ಸದಸ್ಯ ಸೋಮಶೇಖರ್, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಟ್ರಸ್ಟ್ ಅಧ್ಯಕ್ಷ ಲೋಕೇಶ್, ಡಾ.ಸುಜಾತ, ಟ್ರಸ್ಟಿ ನಂಜುಂಡಿ ಬಾನಂದೂರು ಸೇರಿದಂತೆ ಬೋಧಕ, ಬೋಧಕೇತರ ಹಾಗೂ ಟ್ರಸ್ಟಿನ ಸದಸ್ಯರು ಪಾಲ್ಗೊಂಡಿದ್ದರು.