ಪಾಂಡವಪುರ ತಾಲೂಕಿನ ಹೆಗ್ಗಡಹಳ್ಳಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರದಲ್ಲಿ ಗ್ರಾಮದ ಚಿಕ್ಕಮಾದಮ್ಮ ಅವರಿಗೆ ಜಾನಪದ ಜನ್ನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾರೋಹಳ್ಳಿ ಎಚ್.ಆರ್.ಧನ್ಯಕುಮಾರ್, ಡಾ.ಎಸ್.ಸಿ.ಮಂಗಳಾ, ಜಿ.ಉಷಾರಾಣಿ, ಛಾಯಾ ಇತರರು ಇದ್ದರು. 
ಜಿಲ್ಲೆ

ಮಾನವನ ಹುಟ್ಟಿನೊಂದಿಗೆ ರೂಪುಗೊಡ ಜಾನಪದ

ಶಿವಶಂಕರ್ ಎಂ. ಹೆಬ್ಬಳ್ಳ

ಪಾಂಡವಪುರ : ಮಾನವನ ಹುಟ್ಟಿನೊಂದಿಗೆಯೇ ಜಾನಪದವು ರೂಪುಗೊಂಡಿದ್ದು, ಇದರ ಉಳಿವಿಗೆ ಪ್ರತಿಯೊಬ್ಬರೂ ಗಮನಹರಿಸಬೇಕು ಎಂದು ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಹಾರೋಹಳ್ಳಿ ಎಚ್.ಆರ್.ಧನ್ಯಕುಮಾರ್ ಹೇಳಿದರು.

ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದ ಬಯಲು ರಂಗಮಂದಿರದಲ್ಲಿ ಮಂಡ್ಯ ಜಾನಪದ ಜನ್ನೆಯರು ಸೋಮವಾರ ಆಯೋಜಿಸಿದ್ದ 5ನೇ ವರ್ಷದ ಜಾನಪದ ಜನ್ನೆ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಾನಪದ ಕಲೆ ಉಳಿದೆಲ್ಲ ಕಲೆಗಳಿಗೆ ತಾಯಿ ಬೇರಿದ್ದಂತೆ. ಪುರಾತನ ಕಾಲದಿಂದಲೂ ಈ ಮಣ್ಣಿನಲ್ಲಿ ಹುಟ್ಟಿದ ಕಲೆಯಾಗಿದೆ. ಸಾಹಿತ್ಯ ಹಾಗೂ ಕಲೆಗಳಿಗೆ ಮೂಲವಾಗಿರುವ ಜಾನಪದ ಸಾಹಿತ್ಯ ಗರತಿ ಹಾಡುಗಳಿಂದ ಹುಟ್ಟಿ ತನ್ನ ಪರಿಧಿಯನ್ನು ವಿಸ್ತರಿಸಿಕೊಂಡಿದೆ. ಆದರೆ ಇತ್ತೀಚೆಗೆ ಮಾಧ್ಯಮಗಳ ಹಾವಳಿಯಿಂದ ಜಾನಪದ ಪ್ರಕಾರಗಳು ನಶಿಸಿ ಹೋಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದೆ ಹಳ್ಳಿಗಳಲ್ಲಿ ರಾಗಿ ಬೀಸುವಾಗ, ಭತ್ತ ಕುಟ್ಟುವಾಗ ಹಾಗೂ ಮದುವೆ ಶುಭ ಸಮಾರಂಭಗಳಲ್ಲಿ ಜಾನಪದವಾಗಿ ಬಂದ ಹಾಡುಗಳು ಕೇಳುತ್ತಿದ್ದವು. ಜತೆಗೆ ಸೋಬಾನೆ ಪದಗಳು ಸಾಮಾನ್ಯವಾಗಿರುತ್ತಿತ್ತು. ಆದರೆ ಈ ಸಂಸ್ಕೃತಿ ಈಗ ಮಾಯವಾಗಿದೆ. ಇದೆಲ್ಲದರ ನಡುವೆಯೂ ಗ್ರಾಮೀಣ ಪ್ರದೇಶದಲ್ಲಿ ಜಾನಪದದ ಪ್ರಕಾರಗಳು ಒಂದಿಷ್ಟು ಉಳಿದುಕೊಂಡಿರುವುದು ಸಮಾಧಾನಕರವಾದ ಸಂಗತಿಯಾಗಿದೆ. ಪಾಂಡವಪುರ ತಾಲೂಕಿನಲ್ಲಿ ಕ್ಯಾತನಹಳ್ಳಿ ರಾಮಣ್ಣ, ಸೀತಾಪುರ ಜಯಲಕ್ಷ್ಮೀ ಅವರು ಜಾನಪದ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗೆಯೇ ಹೆಗ್ಗಡಹಳ್ಳಿ ಕೃಷ್ಣೇಗೌಡರು ಜಾನಪದ ಕಲೆಗಳನ್ನು ಪ್ರದರ್ಶಿಸುವ ಮೂಲಕ ರಾಜ್ಯದಲ್ಲಿಯೇ ಹೆಸರು ಮಾಡಿದ್ದಾರೆ. ಮಂಡ್ಯ ತಾಲೂಕಿನ ಕೀಲಾರ ಗ್ರಾಮದ ಕಲಾವಿದರು ಜಾನಪದವನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಎಚ್.ಎಲ್.ನಾಗೇಗೌಡರು ಜಾನಪದ ಲೋಕ ಕಟ್ಟಿ ಬೆಳೆಸಿದ್ದಾರೆ. ಇಲ್ಲಿ ಜಾನಪದದ ಅನೇಕ ಪ್ರಕಾರಗಳನ್ನು ನೋಡಬಹುದಾಗಿದೆ. ಇದೇ ರೀತಿ ಸಾಧನೆ ಮಾಡಿರುವ ಹೆಗ್ಗಡಹಳ್ಳಿ ಚಿಕ್ಕಮಾದಮ್ಮ ಅವರಿಗೆ ಜಾನಪದ ಜನ್ನೆ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.

ಇದೇ ವೇಳೆ ಹೆಗ್ಗಡಹಳ್ಳಿ ಚಿಕ್ಕಮಾದಮ್ಮ ಅವರಿಗೆ ಜಾನಪದ ಜನ್ನೆ ಪ್ರಶಸ್ತಿ, ಐದು ಸಾವಿರ ನಗದು, ಸೀರೆ ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು. ಜತೆಗೆ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯೆ ಕಾರ್ಕಹಳ್ಳಿ ಕೆಂಪಮ್ಮ, ಮಂಡ್ಯದ ಮೀರಾ ಶಿವಲಿಂಗಯ್ಯ ಅವರನ್ನು ಅಭಿನಂದಿಸಲಾಯಿತು.

ಜನಪದ ಜನ್ನೆ ಸಂಘಟನೆಯ ಅಧ್ಯಕ್ಷ ಡಾ.ಎಸ್.ಸಿ.ಮಂಗಳಾ, ಉಪಾಧ್ಯಕ್ಷೆ ಜಿ.ಉಷಾರಾಣಿ, ಖಜಾಂಚಿ ಛಾಯಾ, ನಿರ್ದೇಶಕರಾದ ಟಿ.ವಿ.ತೇಜಸ್ವಿನಿ, ಎನ್.ಎಸ್.ದೇವಿಕಾ, ಅನುಸೂಯ ಕಾಂಬಳೆ, ಎನ್.ರಮ್ಯಾ, ಡಿ.ಪಿ.ಶಿಲ್ಪಾ ಕೃಷ್ಣೇಗೌಡ, ಎ.ಸಿ.ಮಾನಸಾ, ಕಾರಸವಾಡಿ ಮಹದೇವು, ಕೀಲಾರ ಕೃಷ್ಣೇಗೌಡ, ಜಾನಪದ ಕಲಾವಿದ ಸೋಬಾನೆ ಕೃಷ್ಣೇಗೌಡ ಇತರರು ಇದ್ದರು.