ವಿಜಯವಾಣಿ ಸುದ್ದಿಜಾಲ ಉಡುಪಿ
ಉಡುಪಿ ಜಿಲ್ಲೆಯು ಸಂಸ್ಕೃತಿ ಹಾಗೂ ಆಚರಣೆಗಳಿಗೆ ಪ್ರಸಿದ್ಧವಾಗಿದೆ. ವಿವಿಧತೆಯಲ್ಲಿ ಏಕತೆ ಹೊಂದಿರುವ ನಮ್ಮ ಆಚಾರ-ವಿಚಾರಗಳು ಎಲ್ಲರಿಗೂ ಮಾದರಿ. ಪ್ರಾದೇಶಿಕ ಸಾಂಸ್ಕೃತಿಕ ಪರಂಪರೆ ಹಾಗೂ ಆಚರಣೆಗಳಿಂದ ಜೀವನೋತ್ಸಾಹದ ಜತೆಗೆ ಸಂಸ್ಕಾರ ಲಭಿಸುತ್ತದೆ ಎಂದು ಜಿಪಂ ಸಿಇಒ ಪ್ರತೀಕ ಬಾಯಲ್ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಸಾಂಸ್ಕೃತಿಕ ಸಮಿತಿ ಹಾಗೂ ಐಕ್ಯುಎಸಿ ಆಶ್ರಯದಲ್ಲಿ ನಮ್ಮ ಸಂಸ್ಕೃತಿ -ನಮ್ಮ ಹೆಮ್ಮೆ ಎಂಬ ಧ್ಯೇಯದೊಂದಿಗೆ ಇತ್ತೀಚೆಗೆ ಆಯೋಜಿಸಿದ್ದ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವಕರ ಮಾತನಾಡಿ, ಮಕ್ಕಳಿಗೆ ಅವರ ಕುಟುಂಬ ವ್ಯವಸ್ಥೆಯ ಮೂಲಕ ಸಂಸ್ಕೃತಿಯ ಪರಿಚಯವಾಗುತ್ತದೆ. ಆದರೆ, ಇಂತಹ ಜಾನಪದ ಸಾಂಸ್ಕೃತಿಕ ಅಭಿವ್ಯಕ್ತಿಗಳು ನಮ್ಮ ಪರಂಪರೆಯನ್ನು ಸದೃಢವಾಗಿಸುವಲ್ಲಿ ಸಹಕಾರಿಯಾಗುತ್ತದೆ ಎಂದರು.
ಪ್ರಾಧ್ಯಾಪಕರಾದ ಹಮೀದಾ ಬಾನು ಬೇಗಂ, ಡಾ. ಶ್ರೀಧರ ಭಟ್, ಐಕ್ಯುಎಸಿ ಸಂಚಾಲಕ ಡಾ. ಮೇವಿ ಮಿರಾಂದ, ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ಸುಷ್ಮಾ ಟಿ., ದೈಹಿಕ ಶಿಕ್ಷಣ ನಿರ್ದೇಶಕ ಡಾ. ರೋಶನ್ ಶೆಟ್ಟಿ ಉಪಸ್ಥಿತರಿದ್ದರು.
ಜಾನಪದ ಸಂಭ್ರಮದ ಸಂಘಟಕ, ಸಾಂಸ್ಕೃತಿಕ ಸಮಿತಿಯ ಸಂಚಾಲಕ ಡಾ. ಉದಯ ಶೆಟ್ಟಿ ಕೆ. ಸ್ವಾಗತಿಸಿದರು. ಶರಣ್ಯಾ ಕಾರ್ಯಕ್ರಮ ನಿರೂಪಿಸಿದರು. ನೈನಾ ವಂದಿಸಿದರು.
ಸಭಾಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ದೇಸೀಯ ತಿಂಡಿ-ತಿನಿಸುಗಳ ಪ್ರದರ್ಶನ ಮತ್ತು ಮಾರಾಟದಲ್ಲಿ ಪಾಲ್ಗೊಂಡರು. ಎಲ್ಲರೂ ಈ ಪ್ರದೇಶದ ಸಂಸ್ಕೃತಿ ಬಿಂಬಿಸುವ ಉಡುಗೆ ಧರಿಸಿದ್ದರು.