ಶಿವಮೊಗ್ಗ: ಜಾನಪದ ಅತ್ಯಂತ ಶ್ರೇಷ್ಠವಾದ ಭಾರತೀಯ ಕಲೆ. ಜಾನಪದ ಕಲಾವಿದರು ನಮ್ಮ ಸಂಸ್ಕೃತಿ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ರಾಯಭಾರಿಗಳಾಗಿದ್ದಾರೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯೆ ಲಕ್ಷ್ಮೀದೇವಮ್ಮ ಮುಗಳಿ ಹೇಳಿದರು.
ಹೊಸಮನೆಯ ಪತಂಜಲಿ ಯೋಗ ಕಲಾಮಂದಿರದಲ್ಲಿ ಭಾನುವಾರ ಪತಂಜಲಿ ಸಂಸ್ಥೆಯ ಬೆಳ್ಳಿ ಮಹೋತ್ಸವ ಹಾಗೂ ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸವ ಅಂಗವಾಗಿ 100 ಜಾನಪದ ಯುವಜನಮೇಳ ಸಮ್ಮೇಳನ, ಸಾಂಸ್ಕೃತಿಕ ಕಾರ್ಯಕ್ರಮಗಳ ಅಭಿಯಾನ ಉದ್ಘಾಟಿಸಿ ಮಾತನಾಡಿ, ಇಂದು ಆಧುನಿಕತೆಯ ಸಿನಿಮಾ, ಟಿವಿ, ಮೊಬೈಲ್‌ನ ಅಬ್ಬರದಲ್ಲಿ ಗ್ರಾಮೀಣ ಸೋಬಗಿನ ಜಾನಪದ ಕಲೆಯನ್ನು ಉಳಿಸುವುದು ಯಕ್ಷ ಪ್ರಶ್ನೆಯಾಗಿದೆ. ಸಂಘ ಸಂಸ್ಥೆಗಳು ಏಲೆಮರೆ ಕಾಯಿಯಂತಿರುವ ಜಾನಪದ ಕಲಾವಿದರನ್ನು ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಮುಂದಿನ ಪೀಳಿಗೆಗೆ ಉಳಿದು ಬೆಳೆಯಲು ಸಾಧ್ಯ ಎಂದು ತಿಳಿಸಿದರು.
ಬೆಂಗಳೂರಿನ ಕೊಳಚೆ ನಿರ್ಮೂಲನಾ ಮಂಡಳಿ ನಿರ್ದೇಶಕಿ ಕೆ.ಎನ್.ಗೀತಾ ರವೀಂದ್ರ ಮಾತನಾಡಿ, ಸಾಕಷ್ಟು ಜನ ಸಮಾಜ ಸೇವೆಯನ್ನು ಸಲ್ಲಿಸುತ್ತಾ ಬರುತ್ತಿದ್ದಾರೆ. ಅಂತಹ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಇನ್ನೂ ಹೆಚ್ಚಿನ ಸಾಧನೆ ಮಾಡಲು ಸಾಧ್ಯ ಎಂದರು.
ಯೋಗಾಚಾರ್ಯ ಪತಂಜಲಿ ಜೆ.ನಾಗರಾಜ್ ಪ್ರಾಸ್ತವಿಕ ಮಾತನಾಡಿದರು. ಪತಂಜಲಿ ಸಂಸ್ಥೆ ಗೌರವಾಧ್ಯಕ್ಷ ಎಂ.ಈಶ್ವರಪ್ಪ ನವುಲೆ ಅಧ್ಯಕ್ಷತೆ ವಹಿಸಿದ್ದರು. ಮಂಡಗದ್ದೆ ವಲಯದ ರಾಜ್ಯ ಗ್ರಾಮ ಅರಣ್ಯ ಸಮಿತಿಗಳ ಒಕ್ಕೂಟದ ಅಧ್ಯಕ್ಷ ಕೆ.ಗುಣಕರ ಅಪ್ಪುಶೆಟ್ಟಿ, ಸುಶೀಲಾ ಭವಾನಿಶಂಕರ್‌ರಾವ್, ಸಿಇಒ ಪರಿಸರ ಸಿ.ರಮೇಶ್, ನಿರ್ದೇಶಕ ಜಿ.ಈ.ಶಿವಾನಂದಪ್ಪ, ಕಲ್ಲೇನಹಳ್ಳಿ ಗ್ರಾಪಂ ಅಧ್ಯಕ್ಷೆ ಬಿ.ಕೆ.ಪುಷ್ಪಾ, ವಸಂತಕುಮಾರ್, ಎಂ.ಬಾಸೂರು, ಶ್ರೀರಾಮ್, ಡಾ. ಪಿ.ಬಾಲಪ್ಪ, ಡಾ. ಎಚ್.ಸಿ.ಈಶ್ವರನಾಯಕ್ ಮುಡುಬಾ, ಲೀಲಾವತಿ, ಕುರಿ ಗೋವಿಂದಪ್ಪ, ಬಾಸೂರು ಪರಮೇಶ್ವರಪ್ಪ ಇದ್ದರು.