ಜಿಲ್ಲೆ

ಜಾನಪದ ಶೈಲಿಯ ಶಾಸ್ತ್ರಬದ್ಧ ಗಾಯನ ಮಹತ್ತರವಾದುದು

ಮಂಜುನಾಥ ತಿಮ್ಮಯ್ಯ

ಮೈಸೂರು : ಜಿಲ್ಲಾ ಮತ್ತು ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ಎಸ್.ಎಸ್. ಫೌಂಡೇಷನ್ ಸಹಯೋಗದಲ್ಲಿ ಸಾಹಿತಿ ಡಾ.ಪುಟ್ಟಪ್ಪ ಮುಡಿಗುಂಡ ಅವರ ಮಹದೇಶ್ವರ ಗೀತಾಮೃತ ಕೃತಿ ಬಿಡುಗಡೆ ಹಾಗೂ ವಚನ ಗಾಯನ ಕಾರ್ಯಕ್ರಮವನ್ನು ರಾಘವೇಂದ್ರ ನಗರದ ಶ್ರೀ ಬಸವೇಶ್ವರ ಮಠದ ಶರಣ ಭವನದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.


ಜಾನಪದ ತಜ್ಞ ಡಾ.ಪಿ.ಕೆ. ರಾಜಶೇಖರ ಮಾತನಾಡಿ, ನಾನು ಜಾನಪದ ಮಹಾಕಾವ್ಯವನ್ನು ಮಹದೇಶ್ವರರ ಕುರಿತು ಬರೆದ ನಂತರ ಮಂಟೇಸ್ವಾಮಿ ಅವರನ್ನೂ ಮೊದಲುಗೊಂಡು ಅನೇಕ ಜಾನಪದ ಕಾವ್ಯಗಳು ಬಂದವು. ಮಹದೇಶ್ವರರ ಕುರಿತಾದ ಅನೇಕ ಕಾವ್ಯ ಪ್ರಕಾರಗಳು ಮತ್ತು ದ್ವನಿ ಸುರುಳಿಗಳು ಬಂದವು. ಜಾನಪದ ಶೈಲಿಯ ಶಾಸ್ತ್ರಬದ್ಧ ಗಾಯನವೇ ಮಹತ್ತರವಾದದ್ದು ಎಂದರು.


ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಂ.ಚಂದ್ರಶೇಖರ್ ಮಾತನಾಡಿ, ಸುಲಲಿತವಾಗಿ ಓದಿಸಿಕೊಳ್ಳುವ ಹಾಗೂ ಹಾಡಿಸಿಕೊಳ್ಳುವ ಗುಣವುಳ್ಳ ಈ ಕೃತಿಯ ಪದ್ಯಗಳು ಮಲೆ ಮಹದೇಶ್ವರರ ಎಲ್ಲ ಹಾಡುಗಳನ್ನು ನೆನಪಿಸುತ್ತವೆ ಎಂದರು.


ಕುದೇರು ಮಠದ ಶ್ರೀ ಗುರುಶಾಂತ ಸ್ವಾಮೀಜಿ ಮಾತನಾಡಿ, ಲಿಂಗಾಯತ ಒಳ ಪಂಗಡಗಳು ಒಗ್ಗಟ್ಟಿನಿಂದ ನಿಂತರೆ ಸಮಾಜ ಕಟ್ಟುವ ಕೆಲಸ ಸುಲಭವಾಗುತ್ತದೆ ಎಂದರು.


ಎನ್.ಆರ್.ಪುರದ ಬಸವ ಕೇಂದ್ರದ ಶ್ರೀ ಬಸವಯೋಗಿ ಪ್ರಭು ಸ್ವಾಮೀಜಿ ಮಾತನಾಡಿ, ಶೂನ್ಯಪೀಠದ ಗುರು ಪರಂಪರೆಯನ್ನು ಎಡೆಯೂರು ಸಿದ್ದಲಿಂಗೇಶ್ವರರ ವಚನವನ್ನು ನಿರ್ವಚನ ಮಾಡುವ ಮೂಲಕ ಮಲೆ ಮಹದೇಶ್ವರರು 6ನೇ ಶೂನ್ಯಪೀಠಾಧಿಪತಿಗಳಾಗಿದ್ದರೆಂದು ತಿಳಿಸಿದರು.


ಬಸವೇಶ್ವರ ಮಠದ ಶ್ರೀ ಶಿವಪ್ರಭುಸ್ವಾಮೀಜಿ ಮಾತನಾಡಿ, ಮಲೆ ಮಹದೇಶ್ವರರ ಚಿಂತನೆಗಳನ್ನು ಎಲ್ಲರೂ ಅಳವಡಿಸಿಕೊಂಡರೆ ಸಮಾನತೆ ಅನುಷ್ಠಾನಕ್ಕೆ ಬರುವುದು ಎಂದರು.


ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಹೆಳವರಹುಂಡಿ ಸಿದ್ದಪ್ಪ ಮಾತನಾಡಿ, ಜಾನಪದ ಸಾಹಿತ್ಯ ಕುರಿತು ಬಹಳ ಅಧ್ಯಯನ ನಡೆಯಬೇಕು. ಜಾನಪದ ಸಂಸ್ಕೃತಿಯ ಬೆಳಕು. ಈ ತಲೆಮಾರಿಗೂ, ಮುಂದಿನ ಅನಂತ ತಲೆಮಾರುಗಳಿಗೂ ಬೇಕಿದೆ ಎಂದರು.


ಶರಣ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ದೇವರಾಜು ಪಿ. ಚಿಕ್ಕಹಳ್ಳಿ (ದೇಚಿ), ಸಾಹಿತಿ ಡಾ.ಎಸ್. ಪುಟ್ಟಪ್ಪ ಮುಡಿಗುಂಡ, ಕಸಬಾ ಹೋಬಳಿ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಪುಷ್ಪಲತಾ ಕನ್ನಡತಿ ಇದ್ದರು.