ಜಿಲ್ಲೆ

ಜಾನಪದ ಸಾಹಿತ್ಯಕ್ಕಿದೆ ಸಂಸ್ಕಾರ ನೀಡುವ ಶಕ್ತಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ನಮ್ಮ ಜನಪದರ ಜೀವನದ ಸಮಸ್ತ ನೆಲೆಗಳು ಜಾನಪದ ಸಾಹಿತ್ಯದಲ್ಲಿದೆ. ನಮ್ಮ ಬದುಕನ್ನು ತಿದ್ದಿ ಸಂಸ್ಕಾರಗೊಳಿಸುವ ಅದಮ್ಯತೆ ಅದರದಲ್ಲಿದೆ ಎಂದು ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಜಯಶ್ರೀ ಗುತ್ತಲ ದತ್ತಿ ನಿಮಿತ್ತ ಇತ್ತೀಚೆಗೆ ಆಯೋಜಿಸಿದ್ದ ಜಯಶ್ರೀ ಗುತ್ತಲ ಜಾನಪದ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ನಮ್ಮ ಹಳ್ಳಿಯ ಜನರು ನಿರಕ್ಷರಿಗಳಾದರೂ ಎಲ್ಲರಿಗೂ ತಿಳಿಯುವಂತೆ ಆಡು ಭಾಷೆಯಲ್ಲಿ ಜಾನಪದ ಹಾಡು ಕಟ್ಟಿ ಹಾಡುವ ಕಲೆ ಕರಗತ ಮಾಡಿಕೊಂಡಿದ್ದರು. ಜಾನಪದ ಹಾಡುಗಳು ಹಾಗೂ ಸಂಗೀತ ಎರಡೂ ಮನಸ್ಸಿನ ಬೇಸರ, ಜಡತ್ವ ದೂರು ಮಾಡಿ ಮನಸ್ಸಿಗೆ ಸಮಾಧಾನ, ಆನಂದ, ಏಕಾಗ್ರತೆ ಉಂಟು ಮಾಡುತ್ತವೆ. ಈ ಹಾಡುಗಳು ಜನಸಾಮಾನ್ಯರಿಗೂ ಅರ್ಥವಾಗುತ್ತವೆ ಎಂದರು.
ಪಂ. ಎಂ. ವೆಂಕಟೇಶಕುಮಾರ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಆಧುನಿಕತೆಯ ಭರಾಟೆಯಲ್ಲಿ ಮೂಲ ಜಾನಪದ ಹಾಡುಗಳನ್ನು ಸಿನೆಮಾ ದಾಟಿಯಲ್ಲಿ ಹಾಡುತ್ತಿರುವುದು ಸಲ್ಲದು. ಇಂತಹ ಹಾಡುಗಳು ನಮ್ಮ ಜನಪದ ಬದುಕಿಗೆ ಧಕ್ಕೆ ಉಂಟು ಮಾಡುತ್ತವೆ. ಮೂಲ ಜಾನಪದ ಪರಂಪರೆ ಅರ್ಥ ಮಾಡಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿದರು. ದತ್ತಿ ದಾನಿ ಎಸ್​.ಬಿ.ಗುತ್ತಲ, ಡಾ. ಕೃತಿಕಾ ಗುತ್ತಲ, ಸರೋಜಾ ರಾವ್​, ಡಾ. ಮಲ್ಲಿಕಾರ್ಜುನ ತರ್ಲಘಟ್ಟ, ಡಾ. ಶ್ರೀಧರ ಕುಲಕರ್ಣಿ, ಡಾ. ಪ್ರಕಾಶ ಮಲ್ಲಿಗವಾಡ, ಸತೀಶ ತುರಮರಿ, ವೀರಣ್ಣ ಒಡ್ಡೀನ, ಡಾ. ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಚಂದ್ರಶೇಖರ ಅಮಿನಗಡ, ಇತರರು ಇದ್ದರು.
ಶಂಕರ ಹಲಗತ್ತಿ ಸ್ವಾಗತಿಸಿದರು. ವಿಶ್ವೇಶ್ವರಿ ಹಿರೇಮಠ ವಂದಿಸಿದರು.
ಸ್ಪರ್ಧೆ ಲಿತಾಂಶ: ಬೈಲಹೊಂಗಲದ ವೇಣು ಮಾಧವ ಭಜನಾ ಮಂಡಳ ಪ್ರಥಮ ಸ್ಥಾನದೊಂದಿಗೆ ಜಯಶ್ರೀ ಗುತ್ತಲ ಜಾನಪದ ಪುರಸ್ಕಾರ ಪಡೆಯಿತು. ಹುಬ್ಬಳ್ಳಿಯ ಶ್ರೀ ಗೌರಿ ಮಹಿಳಾ ಮಂಡಳ ದ್ವೀತಿಯ, ಧಾರವಾಡದ ನಂದಿಕೋಲು ಮಹಿಳಾ ಮಂಡಳ ಮತ್ತು ಮಂದಹಾಸ ಭಜನಾ ಮಂಡಳ ತೃತೀಯ ಸ್ಥಾನ ಪಡೆದವು. ಧಾರವಾಡದ ವನಸಿರಿ ಮಹಿಳಾ ಮಂಡಳ, ಹುಬ್ಬಳ್ಳಿಯ ನೇತ್ರಾವತಿ ಮಹಿಳಾ ಮಂಡಳ, ಅಳ್ನಾವರದ ವೀರಭದ್ರೇಶ್ವರ ಮಹಿಳಾ ಮಂಡಳ ಹಾಗೂ ಮಾಳಮಡ್ಡಿಯ ಗೀತಾ ಭಜನಾ ಮಂಡಳಗಳು ಸಮಾಧಾನಕರ ಬಹುಮಾನ ಪಡೆದವು.