ತಾಳಿಕೋಟೆ: ಜೀವನವೆಂಬುದು ಒಳ್ಳೆಯ ಸಂಸ್ಕೃತಿ ಬಿಂಬಿಸುವಂಥದ್ದು. ಇದುವೇ ಜನಪದ ಸಾಹಿತ್ಯವಾಗಿದೆ ವಿಜಯಪುರದ ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸಂಚಾಲಕ ಪ್ರೊ.ದೊಡ್ಡಣ್ಣ ಭಜಂತ್ರಿ ಹೇಳಿದರು.
ತಾಲೂಕಿನ ಮಿಣಜಗಿ ಗ್ರಾಮದಲ್ಲಿ ಗ್ರಾಮದೇವತೆ (ದ್ಯಾಮವ್ವದೇವಿ) ಹಾಗೂ ಮಾಯಮ್ಮದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಜಾನಪದ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೃಷಿ ಕಾಯಕದಲ್ಲಿ ಬೇಸರಕೆ ಕಳೆದುಕೊಳ್ಳಲು ವಿವಿಧ ಬಗೆಯ ಜನಪದ ಕಟ್ಟಿ ಹಾಡಿದವರು ಜನಪದದವರೇ ಆಗಿದ್ದಾರೆ. ಹಲಸಂಗಿ ಗೆಳೆಯರು ಜಾನಪದ ಸಾಹಿತ್ಯಕ್ಕೆ ಮೆರುಗು ತರುವಂತಹ ಕಾರ್ಯ ಮಾಡಿದ್ದಾರೆ. ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಬಾಳನಗೌಡ ಪಾಟೀಲ ಅವರ ಸೇವಾ ಕಾರ್ಯ ಸ್ಮರಣೀಯ ಎಂದರು.
ವಿಜಯಪುರ ಸಾಂಸ್ಕೃತಿಕ ಚಿಂತಕ ಮೋಹನ ಕಟ್ಟಿಮನಿ ಮಾತನಾಡಿ, ಕನ್ನಡ ಜಾನಪದವನ್ನು ಶ್ರೀಮಂತಗೊಳಿಸುವ ಕಾರ್ಯವಾದರೆ ಶರಣರ ಪರಿಚಯವಾಗಲಿದೆ ಎಂದರು.
ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಬಾಳನಗೌಡ ಪಾಟೀಲ ಮಾತನಾಡಿದರು. ವಿಕಾಸ ಪಬ್ಲಿಕ್ ಸ್ಕೂಲ್ ಮಕ್ಕಳು ರೈತಗೀತೆ ಹಾಡಿದರು.
ಹಿರೂರ ಭೋಗೇಶ್ವರ ಭಜನಾ ಮಂಡಳಿಯಿಂದ ಭಜನಾ ಪದ, ಕುಂಟೋಜಿ ಬಸವೇಶ್ವರ ಹಂತಿ ಮೇಳದಿಂದ ಹಂತಿಪದ, ಕುಂಟೋಜಿ ಚೌಡಕಿ ಮೇಳದಿಂದ ರೇಣುಕಾ ಯಲ್ಲಮ್ಮ ಚೌಡಕಿ ಪದ, ಸಿಂದಗಿ ಲಕ್ಷ್ಮೀದೇವಿ ವಾಲಗ ಸಂಘದವರಿಂದ ಡೊಳ್ಳಿನ ವಾಲಗ, ತಡಲಗಿ ರಾಮಧೂತ ಹೆಜ್ಜೆ ಮೇಳದವರಿಂದ ಹೆಜ್ಜೆ ಕುಣಿತ, ರೇಣುಕಾದೇವಿ ತೊಗತಿ ಮಸೂತಿಯವರಿಂದ ಜೋಗತಿ ಕುಣಿತ, ಕರಿಮಲ್ಲೇಶ್ವರ ಗೊರವರ ಕುಣಿತ ಸೇರಿ ಇತರ ತಂಡದವರು ವೇದಿಕೆಯಲ್ಲಿ ಕಲೆ ಪ್ರದರ್ಶಿಸಿದರು.
ಕಜಾಪ ನಿಡಗುಂದಿ ತಾಲೂಕು ಘಟಕದ ಅಧ್ಯಕ್ಷ ವೈ.ಎಸ್.ಗಂಗಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಮಳ್ಳಿ, ಬಸವರಾಜ ಹಾರಿವಾಳ, ಸಿದ್ದರಾಮ ಬಿರಾದಾರ, ಎ.ಆರ್.ಮುಲ್ಲಾ, ಗಂಗಾಧರ ಬಡಿಗೇರ, ಪ್ರೊ.ಜಿ.ಎಂ.ಹಳ್ಳೂರ, ಪತ್ರಕರ್ತ ಜಿ.ಟಿ.ಘೋರ್ಪಡೆ, ದೇವೆಂದ್ರ ಕೊಪ್ಪದ, ಈರಸಂಗಪ್ಪಗೌಡ ಪಾಟೀಲ, ಬಾಪುಗೌಡ ಬಿರಾದಾರ, ಎಸ್.ಐ.ಬಿರಾದಾರ ಸೇರಿ ಇತರರನ್ನುಸನ್ಮಾನಿಸಲಾಯಿತು.
ಕಜಾಪ ತಾಳಿಕೋಟೆ ಘಟಕದ ಅಧ್ಯಕ್ಷ ಸಿದ್ದನಗೌಡ ಕಾಶಿನಕುಂಟಿ ಸ್ವಾಗತಿಸಿದರು. ಶಿಕ್ಷಕ ಆರ್.ಎಸ್.ವಾಲಿಕಾರ ನಿರೂಪಿಸಿದರು. ಸಿದ್ದು ಕರಡಿ ವಂದಿಸಿದರು.