ಜಿಲ್ಲೆ

ಜನಪದ ಕಲೆಗೆ ಬೇಕಿದೆ ಪ್ರೋತ್ಸಾಹ: ಜಾನಪದ ವಿದ್ವಾಂಸ ಡಾ.ಎಂ.ಬೈರೇಗೌಡ ಅಭಿಮತ

ಮಂಡ್ಯ: ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಜನಪದ ಕಲೆಗೆ ಹೆಚ್ಚಿನ ಪ್ರೋತ್ಸಾಹಬೇಕಿದೆ ಎಂದು ಜಾನಪದ ವಿದ್ವಾಂಸ ಡಾ.ಎಂ.ಬೈರೇಗೌಡ ಬೇಸರ ವ್ಯಕ್ತಪಡಿಸಿದರು.

ನಗರದ ಮಹಿಳಾ ಸರ್ಕಾರಿ ಕಾಲೇಜಿ(ಸ್ವಾಯತ್ತ)ನಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಶನಿವಾರ ಆಯೋಜಿಸಿದ್ದ ಜಾನಪದ ಜಾತ್ರೆಯಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಜನಪದ ಕಲಾವಿದರು ಮೂಲೆಗುಂಪಾಗುತ್ತಿದ್ದಾರೆ. ಆದರೆ ಕೆಲ ಜಾಣ ಕಲಾವಿದರು ದೇಶ, ವಿದೇಶಗಳನ್ನು ಸುತ್ತುವ ಮೂಲಕ ಮೂಲ ಕಲಾವಿದರಿಗೆ ಸಿಗಬೇಕಾದ ಅವಕಾಶವನ್ನು ಬಳಸಿಕೊಳ್ಳುತ್ತಿದ್ದಾರೆ. ಇನ್ನು ಮುಂದಾದರೂ ರಾಜ್ಯ ಸರ್ಕಾರ ಮೂಲ ಕಲಾವಿದರನ್ನು ಗುರುತಿಸುವ ಕೆಲಸವನ್ನು ಮಾಡಬೇಕು ಎಂದು ಒತ್ತಾಯಿಸಿದರು.

ಆಧುನಿಕ ಜೀವನಶೈಲಿ ತಂತ್ರಜ್ಞಾನ, ಸಾಮಾಜಿಕ ಮಾಧ್ಯಮಗಳು ಎಷ್ಟೇ ಬಂದರೂ ಕೂಡ ಜನಪದ ಕಲೆ ತಮ್ಮ ಅಸ್ತಿತ್ವವನ್ನ ಉಳಿಸಿಕೊಂಡಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಮಂಡ್ಯ ಜಿಲ್ಲೆ ಜನಪದದ ಕಣಜ, ಅದರಲ್ಲೂ ನಾಗಮಂಗಲ ತಾಲೂಕು ಹಲವಾರು ಜನಪದರನ್ನು ನಾಡಿಗೆ ಕೊಟ್ಟಿದೆ. ಜನಪದ ಎಂಬುದು ತುಂಬಿದ ಕಣಜ ಇದಂತೆ. ಅದರಲ್ಲಿ ಎಲ್ಲ ರೀತಿಯ ಮಾಹಿತಿ ಇದೆ. ಆದರೆ ಅದನ್ನ ಹೇಗೆ ಬಳಸಿ ಬೆಳೆಸಿಕೊಳ್ಳುತ್ತೇವೆ ಎಂಬುದು ಬಹಳ ಮುಖ್ಯವಾಗಿತ್ತದೆ ಎಂದರು.

ಸಮಾರಂಭ ಉದ್ಘಾಟಿಸಿದ ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆ ಸಾಂಸ್ಕೃತಿಕ ಕಾರ್ಯಕ್ರಮವೂ ಅತ್ಯಾವಶ್ಯಕ. ಸ್ವಾಯತ್ತತೆ ಪಡೆದಿರುವ ಮಹಿಳಾ ಸರ್ಕಾರಿ ಕಾಲೇಜು ಹಸಿರು ವಿಶ್ವವಿದ್ಯಾನಿಲಯವಾಗಬೇಕು. ಅದಕ್ಕಾಗಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡುತ್ತೇನೆ. ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಶಿಕ್ಷಣ ಪಡೆಯಬೇಕು. ಆಗ ಉತ್ತಮವಾಗಿ ಸಾಧನೆ ಮಾಡಬಹುದು ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಆರ್.ದಶರಥ ಮಾತನಾಡಿದರು. ಜನಪದ ಕಲಾವಿದ ಕದಲಗೆರೆ ಶಿವಣ್ಣಗೌಡ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಸಾಂಸ್ಕೃತಿಕ ಸಮಿತಿಯ ಸಂಚಾಲಕ ಡಾ.ಲಿಂಗರಾಜು, ಡಾ.ಸಂತೋಷ್‌ಕುಮಾರ್, ಡಾ.ದೀಪಕ್‌ಕುಮಾರ್, ಕೆ.ಪಿ.ರವಿಕಿರಣ್, ಡಾ.ಕೆಂಪಮ್ಮ, ಡಾ.ಎಚ್.ಎಸ್.ಶಿವರಾಜು, ವೈ.ಕೆ.ಭಾಗ್ಯ ಇತರರಿದ್ದರು.