ಮಳವಳ್ಳಿ: ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ರಂಗಭೂಮಿ ನಾಟಕಗಳು ಸಮೃದ್ಧವಾಗಿದ್ದರೆ ಅಲ್ಲಿ ಸೌಹಾರ್ದತೆ ನೆಲೆಸಿರುತ್ತದೆ ಎಂದು ಹಿರಿಯ ರಂಗಕರ್ಮಿಯೂ ಆದ ಚಿತ್ರನಟ ಬಿ.ಸುರೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಬುಧವಾರ ರಂಗ ಬಂಡಿ ಟ್ರಸ್ಟ್ ವತಿಯಿಂದ ನಾಲ್ಕು ದಿನಗಳ ಕಾಲ ಹಮ್ಮಿಕೊಂಡಿದ್ದ ಮಳವಳ್ಳಿ ಸುಂದರಮ್ಮ ರಂಗೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಜನಪದ ಕಲೆಯ ಸೊಗಡು ಅಡಗಿರುವುದರಿಂದ ಇಂದಿನ ಪೀಳಿಗೆ ಇವುಗಳನ್ನು ಉಳಿಸಿ-ಬೆಳೆಸಲು ಆಸಕ್ತಿ ತೋರಬೇಕು. ಈ ಮೂಲಕ ನಮ್ಮ ಪರಂಪರೆಯ ಐತಿಹ್ಯಗಳ ಕೊಂಡಿಯನ್ನು ಮುಂದೆ ಕೊಂಡೊಯ್ಯಬೇಕು ಎಂದರು.
ಜಿಲ್ಲೆಯಲ್ಲಿ ಚಿತ್ರರಂಗ, ರಂಗಭೂಮಿ ಮತ್ತು ಜನಪದದಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಿರುವ ಕಲಾವಿದರಿದ್ದಾರೆ. ಅದರಲ್ಲೂ ಮಳವಳ್ಳಿ ತಾಲೂಕಿನಲ್ಲಿ ಮಂಟೇಸ್ವಾಮಿ, ಮಾದಪ್ಪರಂತಹ ಪವಾಡ ಪುರುಷರು ನಡೆದಾಡಿ ಅಂದಿನ ಜನ ಸಮೂಹದ ಮೇಲೆ ನಡೆಯುತ್ತಿದ್ದ ಅಸಮಾನತೆಗಳು, ದೌರ್ಜನ್ಯಗಳ ವಿರುದ್ಧ ಪ್ರತಿರೋಧವೊಡ್ಡಿದ ಜಾನಪದ ನಾಯಕರು ಇವರು. ಇಂತಹ ಮಹಾನ್ ವ್ಯಕ್ತಿಗಳ ಪ್ರಭಾವ ಇಂದಿಗೂ ಈ ಭಾಗದ ಜನರಲ್ಲಿ ಅಪಾರವಾಗಿದೆ ಎಂದು ಹೇಳಿದರು.
ಮಳವಳ್ಳಿ ಸುಂದರಮ್ಮ ಮೊಟ್ಟ ಮೊದಲ ರಂಗಭೂಮಿ ನಟಿ, ಸಂಗೀತ, ಹಾಡುಗಾರಿಕೆಯಲ್ಲೂ ಪ್ರತಿಭಾವಂತರಾಗಿದ್ದರು. ಇವರ ಸ್ಮರಣೆಯಲ್ಲಿ ಪ್ರತಿವರ್ಷ ನಾಟಕೋತ್ಸವ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಚಿತ್ರನಟ ಮಂಡ್ಯ ರಮೇಶ್ ಮಾತನಾಡಿ, ರಂಗಭೂಮಿ ಬಹಳ ಸತ್ವಯುತವಾದದ್ದು. ನಮ್ಮ ಕಲೆಗಳು ಯಾವುದೇ ನಕಲು ಮಾಡಲು ಸಾಧ್ಯವಿಲ್ಲ. ಇಲ್ಲಿ ಜನರಿಂದ ಮೆಚ್ಚುಗೆ ಪಡೆದವರು ಯಾವುದೇ ಕಲಾಕ್ಷೇತ್ರದಲ್ಲಾದರೂ ಯಶಸ್ಸು ಕಾಣಬಹುದು ಎಂದ ಅವರು, ರಂಗ ಬಂಡ್ಡಿ ಸಂಸ್ಥೆ ರಂಗೋತ್ಸವ ನಡೆಸಿ ನಟಿ ಉಮಾಶ್ರೀ ಅವರನ್ನು ಗೌರವಿಸಿರುವುದು ಶ್ಲಾಘನೀಯ ಎಂದರು.
ರಂಗೋತ್ಸವದ ಸಂಘಟಕರಾದ ಎನ್.ಎಲ್.ಭರತ್ ರಾಜ್, ಜಗದೀಶ್ ಕಟ್ಟೆಮನಿ, ದರ್ಶನ್ ಅವರನ್ನು ಅಭಿನಂದಿಸಲಾಯಿತು. ರಂಗ ಬಂಡಿ ಟ್ರಸ್ಟ್ ಅಧ್ಯಕ್ಷ ಮಧು, ಸಮಾಜ ಸೇವಕ ಟಿ.ಎಂ.ಪ್ರಕಾಶ್, ಪುರಸಭೆ ಸದಸ್ಯ ನೂರುಲ್ಲಾ, ಕಲಾವಿದರಾದ ಮಧುಕರ್, ವೇಣುಗೋಪಾಲ್ ಹಾಜರಿದ್ದರು.