ಜಿಲ್ಲೆ

ಆಧುನಿಕತೆಯಿಂದ ಮರೆಯಾಗುತ್ತಿದೆ ಜಾನಪದ ಸಂಸ್ಕೃತಿ

ಎಚ್.ಡಿ.ಕೋಟೆ: ಯುವಜನರಿಗೆ ಜಾನಪದ ಸಂಸ್ಕೃತಿ ಪರಿಚಯಿಸಲು ಜಾನಪದ ಸಾಂಸ್ಕೃತಿಕ ಉತ್ಸವ ಮತ್ತು ಹಬ್ಬಗಳನ್ನು ಶಾಲಾ ಕಾಲೇಜಿನಲ್ಲಿ ಆಯೋಜಿಸುವುದು ಅಗತ್ಯ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2024-25ನೇ ಸಾಲಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಹಾಗೂ ಜಾನಪದ ಉತ್ಸವದ ಅಂಗವಾಗಿ ಶನಿವಾರ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ರಾಗಿ ಮತ್ತು ಭತ್ತದ ರಾಶಿಗೆ ಪೂಜೆ ಮಾಡಿ, ರಾಗಿಕಲ್ಲು ಬೀಸಿ, ಭತ್ತ ಕುಟ್ಟುವುದರ ಮೂಲಕ ವಿಶಿಷ್ಟವಾಗಿ ಉದ್ಘಾಟಿಸಿ ಮಾತನಾಡಿದರು.

ಜಾನಪದ ಸಂಸ್ಕೃತಿ ನಮ್ಮ ಹೆಮ್ಮೆ ಮತ್ತು ಬದುಕಿನ ಅವಿಭಾಜ್ಯ ಅಂಗ. ಹಳ್ಳಿಯ ಗ್ರಾಮೀಣ ಪರಿಸರದ ಜಾನಪದ ಸಂಸ್ಕೃತಿಯನ್ನು ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಮರುಸೃಷ್ಟಿಸಿದ್ದಾರೆ. ಆಧುನಿಕ ನಾಗರಿಕತೆಯ ಯಾಂತ್ರಿಕ ಓಟದ ಬದುಕಿನ ನಡುವೆ ಜಾನಪದ ಸಂಸ್ಕೃತಿ ಮರೆಯಾಗುತ್ತಿದೆ ಎಂದರು.

ಈಗಾಗಲೆ 4.5 ಕೋಟಿ ರೂ.ಅನುದಾವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಿ ಕಾಲೇಜಿನ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಈ ವರ್ಷದಿಂದ ಬಿ.ಸಿ.ಎ. ವಿಭಾಗ ಆರಂಭವಾಗುತ್ತಿರುವುದು ಸಂತಸದ ವಿಷಯ ಎಂದರು.

ಪ್ರಾಂಶುಪಾಲರು ಮತ್ತು ಅಧ್ಯಾಪಕರು ಹೆಚ್ಚು ಪರಿಶ್ರಮದಿಂದ ಪ್ರಥಮ ವರ್ಷಕ್ಕೆ 200ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ದಾಖಲು ಮಾಡಿಸಿದರೆ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ತಾಲೂಕಿನ ಪ್ರಗತಿಪರ ರೈತ ಮಲಾರ ಗ್ರಾಮದ ಪುಟ್ಟಯ್ಯ ಮಾತನಾಡಿ, ವಿದ್ಯಾರ್ಥಿಗಳು ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಮಾಡಬೇಕು. ರೈತರು ಸ್ವಾವಲಂಬಿ ಜೀವನ ನಡೆಸಬಹುದು ಎನ್ನುವುದಕ್ಕೆ ನಾನೇ ಉದಾಹರಣೆ. ಈ ಕಾರಣಕ್ಕಾಗಿಯೇ ಅರ್ಜಿ ಹಾಕದೆಯೇ ನನಗೆ 2015ರಲ್ಲಿ ನಾಡಹಬ್ಬ ದಸರಾ ಮಹೋತ್ಸವ ಉದ್ಘಾಟಿಸುವ ಭಾಗ್ಯ ಬಂದಿತು ಎಂದು ಹೇಳಿದರು.

ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಸಾಂಸ್ಕೃತಿಕ ಮತ್ತು ಕ್ರೀಡೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲ ಪ್ರೊ. ಅರುಣ್‌ಕುಮಾರ್ ಬಹುಮಾನ ವಿತರಿಸಿದರು.

ಜಾನಪದ ಕಲಾ ತಂಡಗಳ ಮೆರವಣಿಗೆಯಲ್ಲಿ ಪಟ ಕುಣಿತ, ಕಂಸಾಳೆ. ಡೊಳ್ಳು, ತಮಟೆ ವಾದ್ಯಗಳೊಂದಿಗೆ ಹಳ್ಳಿಕಾರ್ ಎತ್ತಿನ ಬಂಡಿಯಲ್ಲಿ ಶಾಸಕ ಅನಿಲ್ ಚಿಕ್ಕಮಾದು ಕಾಲೇಜಿನ ಆವರಣದ ಸಮಾರಂಭದ ವೇದಿಕೆಗೆ ಆಗಮಿಸಿದರು. ಜಾನಪದ ಹಬ್ಬದ ಅಂಗವಾಗಿ ಕಾಲೇಜಿನ ಆವರಣದಲ್ಲಿ ಅಪ್ಪಟ ಹಳ್ಳಿಯ ಪರಿಸರವನ್ನು ವಿದ್ಯಾರ್ಥಿಗಳು ನಿರ್ಮಿಸಿದ್ದರು. ಹಳ್ಳಿಯ ಅಡುಗೆ ಒಲೆ, ನೀರು ಸೇದುವ ಬಾವಿಕಟ್ಟೆ. ಮರಕ್ಕೆ ಕಟ್ಟಿದ ಉಯ್ಯಲೆ, ಪಗಡೆ, ಬುಗುರಿ, ಕುಂಟೇ ಬಿಲ್ಲೆ ಆಟ, ಕಬಡ್ಡಿ, ಆಣೆಕಲ್ಲು, ಗೋಲಿಯಾಟ ಹೀಗೆ ಹಳ್ಳಿಯ ಆಟಗಳನ್ನು ಕಾಲೇಜಿನ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಮರುಸೃಷ್ಟಿಸಿದ್ದರು.

ಕಚೇರಿ ಅಧೀಕ್ಷಕ ಬಾಲಾಜಿ, ದೈಹಿಕ ಶಿಕ್ಷಣ ನಿರ್ದೇಶಕ ಪುಟ್ಟರಾಜು, ಪ್ರೊ. ಬೋರಮ್ಮ ಎಸ್.ಅಂಗಡಿ. ಡಾ. ಮರಿದೇವಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಸಿ.ಮಂಜುನಾಥ್, ಪುರಸಭಾ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಮಧು ಕುಮಾರ್, ಚೌಡಳ್ಳಿ ಜವರಯ್ಯ, ಸಿದ್ದರಾಜು, ವೇಣುಗೋಪಾಲ್, ಮಲ್ಲೇಶ್, ಸಿದ್ದರಾಜು. ಡಾ. ಸೋಮಶೇಖರ್, ಪ್ರೊ. ಪ್ರಧಾನ ಗುರುದತ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಪ್ರೊ.ರಾಜಶೇಖರ್, ಪ್ರೊ. ಕೃ.ಪ. ಗಣೇಶ ಇದ್ದರು.