ಜಿಲ್ಲೆ

ವ್ಯಕ್ತಿತ್ವ ರೂಪಿಸುವಲ್ಲಿ ಜನಪದ ಕಲೆಗಳ ಪ್ರಭಾವ ಹೆಚ್ಚು: ಡಾ. ಶಾಲಿನಿ ರಜನೀಶ್

ಬೆಂಗಳೂರು: ಮನುಷ್ಯನ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಜನಪದ ಕಲೆಗಳ ದಟ್ಟ ಪ್ರಭಾವವಿದೆ. ಜನಪದ ಕಲೆಗಳಲ್ಲಿ ಬದುಕಿನ ನೀತಿ, ಮೌಲ್ಯಗಳು ತಲೆಮಾರಿನಿಂದ ತಲೆಮಾರಿಗೆ ಬೆಳೆದುಬಂದಿವೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿಸಿದರು.

ಸರ್ಕಾರಿ ಕಲಾ ಕಾಲೇಜು ಮತ್ತು ರಂಗ ಚಾರಕ ಟ್ರಸ್ಟ್ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಹೆಜ್ಜೆ ಗೆಜ್ಜೆ ಮಹಿಳಾ ಜಾನಪದ ಉತ್ಸವ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನಪದ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾಲೇಜಿನಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮವು ಪೂರಕವಾಗಿದೆಯೆಂದು ಶ್ಲಾಘಿಸಿದರು.

ವಿದ್ಯಾರ್ಥಿಗಳು ಪ್ರದರ್ಶಿಸಿದ ಕೋಲಾಟ, ಕೊಡವ, ಕಂಸಾಳೆ ಮೊದಲಾದ ಜನಪದ ಕಲೆಗಳಲ್ಲಿ ಸಂಸ್ಕೃತಿಯ ಅನಾವರಣದ ಜತೆಗೆ ಖುಷಿಯಿದೆ. ಕಲಾವಿದರು ಮತ್ತು ಪ್ರೇಕ್ಷಕರು ಕಲೆಗಳ ಮೂಲಕ ಪಡೆದ ನೆಮ್ಮದಿಯು ಹಣದಿಂದ ಬರುವಂತದ್ದಲ್ಲ, ಅದು ಸಂಸ್ಕೃತಿ ಮತ್ತು ಪರಂಪರೆಯಿಂದ ಬರುವಂತದ್ದಾಗಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ತು ಸದಸ್ಯ ಪುಟ್ಟಣ್ಣ ಮಾತನಾಡಿ, ಸರ್ಕಾರಿ ಕಲಾ ಕಾಲೇಜಿಗೆ ಭವ್ಯ ಇತಿಹಾಸವಿದೆ. 1915ರಲ್ಲಿ ಮಹಾತ್ಮ ಗಾಂಧೀಜಿಯವರು ಭೇಟಿ ನೀಡಿದ್ದರು. ಅದರ ನೆನಪಿಗಾಗಿ ಗಾಂಧೀಜಿ ಅವರ ಪ್ರತಿಮೆಯನ್ನು ಅನಾವರಣ ಮಾಡಲಾಗುವುದು ಎಂದು ಪ್ರಕಟಿಸಿದರು.

ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕಿ ಡಾ. ಶೋಭಾ ಜಿ. ಮಾತನಾಡಿ, ಹೆಜ್ಜೆ ಗೆಜ್ಜೆ ಮಹಿಳಾ ಜಾನಪದ ಉತ್ಸವವು ಮಾದರಿಯಾಗಿದೆ. ವಿದ್ಯಾರ್ಥಿಗಳಲ್ಲಿ ಜನಪದ ಕಲೆಗಳನ್ನು ಬೆಳೆಸುವಲ್ಲಿ ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು.

ರಂಗ ಚಾರಕ ಫೌಂಡೇಶನ್ನಿನ ಹಿದಾಯತ್ ಅಹಮದ್ ಅವರ ತರಬೇತಿಯಲ್ಲಿ ನೂರು ವಿದ್ಯಾರ್ಥಿನಿಯರು ಡೊಳ್ಳು, ಲಂಬಾಣಿ ನೃತ್ಯ, ಕೊಡವ ನೃತ್ಯ, ಹಾಲಕ್ಕಿ ಸುಗ್ಗಿ ಕುಣಿತ, ಕಂಸಾಳೆ, ರಂಗ ಕುಣಿತ, ಹೆಜ್ಜೆ ಕುಣಿತ, ತಮಟೆ ವಾದನ ಕಲಾ ಪ್ರದರ್ಶನ ನೀಡಿದರು.

ಇದೇ ವೇಳೆ ಕೆಪಿಎಸ್‌ಸಿ ಸದಸ್ಯೆ ಡಾ. ಆರ್. ಕಾವಲಮ್ಮ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ. ಪಿ.ಟಿ. ಶ್ರೀನಿವಾಸ, ಕನ್ನಡ ಸಂಘದ ಸಂಚಾಲಕ ಡಾ. ರುದ್ರೇಶ್ ಅದರಂಗಿ ಸೇರಿ ಹಲವರು ಉಪಸ್ಥಿತರಿದ್ದರು.