ವಿಜಯವಾಣಿ ಸುದ್ದಿಜಾಲ ಧಾರವಾಡ
ಮೂಲ ಜನಪದ ಕಲೆಗಳು ಭಾರತೀಯ ಸಂಸ್ಕೃತಿ ಬೆಳೆಸುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಜನಪದದ ವಿವಿಧ ಮಜಲುಗಳಾದ ಕರಡಿ ಮೇಳ, ಹಂತಿ ಪದಗಳು, ಡೊಳ್ಳು ಕುಣಿತ, ಗೀಗೀ ಪದಗಳು, ಹೆಜ್ಜೆ ಮೇಳಗಳನ್ನು ಉಳಿಸಿ ಬೆಳೆಸುವ ಅವಶ್ಯಕತೆ ಇದೆ ಎಂದು ಕೆ.ಇ. ಬೋರ್ಡ್ಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ. ಎಂ.ಎ. ಸಿದ್ಧಾಂತಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಜಾನಪದ ಮಂಟಪವು ಕೆ.ಇ.ಬೋರ್ಡ್ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಕಾಲೇಜು ಆಶ್ರಯದಲ್ಲಿ ತಾಲೂಕಿನ ಇಟಿಗಟ್ಟಿ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ಗ್ರಾಮ ಕಲಾ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಶ್ರೀಶೈಲ ಹುದ್ದಾರ ಮಾತನಾಡಿ, ಇಂದಿನ ಯುವ ಪೀಳಿಗೆ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿ ದೇಸಿ ಸಂಸ್ಕೃತಿ ಧಿಕ್ಕರಿಸುತ್ತಿದ್ದಾರೆ. ಅವರಲ್ಲಿ ಜನಪದ ಸಂಸ್ಕೃತಿಯ ಮೂಲಕ ಮಾನವೀಯ ಮೌಲ್ಯ ಬೆಳೆಸಬೇಕಿದೆ ಎಂದರು.
ಪಾಲಿಕೆ ಸದಸ್ಯೆ ನೀಲಮ್ಮ ಅರವಾಳದ ಮಾತನಾಡಿ, ಬೀಸುವ ಕಲ್ಲಿನ ಪದ, ಲಾಲಿ ಹಾಡು, ಜೋಗತಿ ನೃತ್ಯ, ವೀರಗಾಸೆ, ಗೊರವರ ಕುಣಿತದಂತ ಜಾನಪದ ಕಲೆಗಳನ್ನು ನಾವು ಉಳಿಸಿ-ಬೆಳೆಸಿ ನಮ್ಮ ಮೂಲ ಜನಪದ ಸಂಸ್ಕೃತಿ ಗಟ್ಟಿಗೊಳಿಸಬೇಕು. ಈ ನಿಟ್ಟಿನಲ್ಲಿ ಪ್ರಭು ಕುಂದರಗಿಯಂತಹ ಜಾನಪದ ತಜ್ಞರು ಜಾನಪದ ಕಲೆಗಳ ಕುರಿತು ಉತ್ಸವ, ಕಾರ್ಯಾಗಾರ, ಮೇಳಗಳನ್ನು ಹಮ್ಮಿಕೊಳ್ಳುತ್ತಿರುವುದು ಪ್ರಶಂಸನೀಯ ಎಂದರು.
ನಂತರ ವಿವಿಧ ತಂಡಗಳು ಜಾನಪದ ಗೀತೆ, ಸೋಬಾನೆ, ರಿವಾಯತ್ ಪದ, ಹೋಳಿ ಪದಗಳು, ಹಂತಿ ಹಾಡುಗಳು, ಮಕ್ಕಳಿಂದ ಕೋಲಾಟ, ಹೆಜ್ಜೆಮೇಳ, ಡೊಳ್ಳು ಕುಣಿತ ಪ್ರದರ್ಶನಗೊಂಡವು.