ವಿಜಯಪುರ : ಜಾನಪದ ಕಲೆ ಕರ್ನಾಟಕದ ಸಂಸತಿ, ಇತಿಹಾಸ ಮತ್ತು ಸಂಪ್ರದಾಯ ಬಿಂಬಿಸುತ್ತವೆ ಎಂದು ಪಟ್ಟಣದ ಶ್ರೀ ಸಾಯಿ ಗಂಗಾ ಪದವಿ ಕಾಲೇಜಿನ ಪ್ರಾಂಶುಪಾಲ ಎಸ್.ಎಸ್.ಪ್ರದಿಪ ಹೇಳಿದರು. ಪಟ್ಟಣದ ಮೇಲೂರು ರಸ್ತೆಯ ಶ್ರೀ ಸಾಯಿ ಜ್ಞಾನಗಂಗಾ ಪದವಿ ಕಾಲೇಜಿನಲ್ಲಿ ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸ್ಪಂದನ ಯುವಜನ ಸೇವಾ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 15 ದಿನಗಳ ಯುವಜನರಿಗೆ ಜಾನಪದ ಕಲೆಗಳ ಬಗ್ಗೆ ವಿವಿಧ ರೀತಿಯ ತರಬೇತಿ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, ಜಾನಪದ ಕಲೆ ನಾಡಿನ ಸಂಸತಿ, ಸಂಪ್ರದಾಯದ ಅವಿಭಾಜ್ಯ ಅಂಗ. ಅವುಗಳು ಕೇವಲ ಮನರಂಜನೆ ನೀಡುವ ಸಾಧನಗಳಲ್ಲದೇ, ಬದಲಿಗೆ ಜನಜೀವನದ ಒಂದು ಪ್ರತಿಬಿಂಬವಾಗಿವೆ ಎಂದರು. ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ.ವಿ.ಪ್ರಶಾಂತ ಮಾತನಾಡಿ, ಜನಪದ ಕಂಠಸ್ಥ ಸಂಪ್ರದಾಯದ ಮೂಲಕ ತಲೆಮಾರುಗಳಿಂದ ಬೆಳೆದು ಬಂದ ಕಲೆ. ಯಕ್ಷಗಾನ, ವೀರಗಾಸೆ, ಕಂಸಾಳೆ, ಡೊಳ್ಳು ಕುಣಿತ ಮತ್ತು ಕೋಲಾಟ ಸೇರಿ ಹಲವು ಕರ್ನಾಟಕದ ವೈವಿಧ್ಯಮಯ ಜಾನಪದ ಕಲೆಗಳಾಗಿದ್ದು, ಇದರಿಂದಾಗಿ ಕಲಾತ್ಮಕ ಮತ್ತು ಸಾಂಸತಿಕ ಪರಂಪರೆ ಹೊಂದಿದೆ ಎಂದು ತಿಳಿಸಿದರು.
ಜಾನಪದ ತರಬೇತಿಯಲ್ಲಿ ಪಟ್ಟಣದ ಜಾನಪದ ಕಲೆಗಳ ತರಬೇತಿದಾರ ಎಸ್.ಎ.ನಾಗೇಶ್ ಅವರಿಂದ ಜನಪದ ಗೀತೆ, ಗುಂಪು ಗಾಯನ, ಭಜನೆ, ಕೋಲಾಟ, ರಂಗಗೀತೆ, ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ ಹಾಗೂ ಜನಪದ ಕಲೆಗಳ ಬಗ್ಗೆ ಅಧ್ಯಯನ ಸೇರಿ ಮುಂತಾದ ತರಬೇತಿ ನೀಡಿದರು. ಈ ವೇಳೆ ತರಬೇತುದಾರ ಎಸ್.ಎ.ನಾಗೇಶ್ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕರಾದ ಅಂಬಿಕಾ, ಲಕ್ಷ್ಮೀದೇವಿ, ನಾಗರಾಜ್, ಯುವ ಸ್ವಯಂ ಸೇವಕರಾದ ವರ್ಷಕ್, ಬಿ.ಎಂ.ತರುಣ್, ಡಿ.ನಿಖಿಲ್, ಎಸ್.ನಿತಿನ್, ನಂದೀಶ್, ಯುವಕ ಮತ್ತು ಯುವತಿ ಮಂಡಳಿಗಳ ಪದಾಧಿಕಾರಿಗಳು, ಕಲಾವಿದರು ಇದ್ದರು.