ಜಿಲ್ಲೆ

ಜೂ.15ಕ್ಕೆ ವಿಶ್ವದಾಖಲೆಗಾಗಿ ರವೀಂದ್ರ ಕಲಾಲಕ್ಷೇತ್ರದಲ್ಲಿ ಜನಪದ ಕಲೆಗಳ ಪ್ರದರ್ಶನ

ಬೆಂಗಳೂರು: ಡಾ.ಜಿ.ನಾರಾಯಣ ಪ್ರತಿಷ್ಠಾನ, ಭಾರತೀಯ ಕನ್ನಡ ಪ್ರತಿಷ್ಠಾನ, ಸುವರ್ಣ ಜ್ಯೋತಿ ಟ್ರಸ್ಟ್ ಸಹಯೋಗದಲ್ಲಿ ಜೂ.15ಕ್ಕೆ ವಿಶ್ವದಾಖಲೆಗಾಗಿ ಜನಪದ ಕಲೆಗಳ ಪ್ರದರ್ಶನವನ್ನು ಏರ್ಪಡಿಸಿದೆ ಎಂದು ಪ್ರತಿಷ್ಠಾನದ ಮುಖ್ಯಸ್ಥ ಜಿ.ನಾ.ಗೋಪಾಲಕೃಷ್ಣ ತಿಳಿಸಿದ್ದಾರೆ.

ನಾಡೋಜ ಡಾ.ಜಿ.ನಾರಾಯಣರವರು ಬೆಂಗಳೂರಿನ ಮಹಾಪೌರರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಜನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ವಿಶೇಷ ಒತ್ತು ನೀಡಿದ್ದು, ಆ ಕಾಲದಲ್ಲಿ ಮೇಳೈಸಿದ ಜನಪದ ಸೊಬಗನ್ನು ವಿಶ್ವಮಟ್ಟದಲ್ಲಿ ಪ್ರತಿಬಿಂಬಿಸುವುದಕ್ಕಾಗಿ ಜೂ.15 ರಂದು ರವೀಂದ್ರ ಕಲಾ ಕ್ಷೇತ್ರದಲ್ಲಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್, ಕರ್ನಾಟಕ ಬುಕ್ ಆಫ್ ರೆಕಾರ್ಡ್, ವರ್ಲ್ಡ್ ಬುಕ್ ಆಫ್ ಡ್ಯಾನ್ಸ್ ರೆಕಾರ್ಡ್ ಸಮ್ಮುಖದಲ್ಲಿ ಬೃಹತ್ ಜನಪದ ಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಆಸಕ್ತರು ಪ್ರದರ್ಶನದಲ್ಲಿ ಪಾಲ್ಗೊಂಡು ವಿಶ್ವದಾಖಲೆಯಲ್ಲಿ ಪಾಲ್ಗೊಳ್ಳುವಂತೆ ಗೋಪಾಲಕೃಷ್ಣ ಕರೆ ನೀಡಿದ್ದಾರೆ.

ಡೊಳ್ಳುಕುಣಿತ, ವೀರಗಾಸೆ, ಪೂಜಾ ಕುಣಿತ, ಜೋಗತಿ ಮೇಳ, ಬೀಸು ಕಂಸಾಳೆ, ಗೊರವರ ಕುಣಿತ, ಕಂಗೀಲು ಕುಣಿತ, ಕೋಲಾಟ, ಪಟದ ಕುಣಿತ, ಹೆಜ್ಜೆ ಕುಣಿತ, ಲಂಗಬೀರರ ಕುಣಿತದ ಕಲಾವಿದರು ತಮ್ಮ ತಂಡದ 5 ನಿಮಿಷದ ಪ್ರದರ್ಶನವನ್ನು ವೀಡಿಯೋ ಮಾಡಿ ವಾಟ್ಸಾಪ್ ಮೂಲಕ ಮೇ15ರೊಳಗೆ ಕಳುಹಿಸಬೇಕು. ಆಯ್ದ ತಂಡಗಳನ್ನು ಜೂ.15ರ ಪ್ರದರ್ಶನಕ್ಕೆ ಆಹ್ವಾನಿಸಲಾಗುವುದು. ಅಂದು ಆಯ್ಕೆಯಾದವರಿಗೆ ಪ್ರಥಮ 1 ಲಕ್ಷ, ದ್ವಿತೀಯ 75 ಸಾವಿರ, ತೃತೀಯ 50 ಸಾವಿರ ಮತ್ತು 10 ತಂಡಗಳಿಗೆ 10 ಸಾವಿರ ಸಮಾಧಾನಕರ ಬಹುಮಾನ ನೀಡಲಾಗುವುದು. ಹೆಚ್ಚಿನ ಮಾಹಿತಿ ಮತ್ತು ವಾಟ್ಸಾಪ್ ಕಳುಹಿಸಲು ದೂ: 9341224368 ಸಂಪರ್ಕಿಸಬಹುದು.