ಜಿಲ್ಲೆ

ಸರ್ಕಾರದಿಂದ ಕಲಾವಿದರ ಪೋಷಣೆ

ತರೀಕೆರೆ: ಜನಪದದಲ್ಲಿ 300ಕ್ಕೂ ಹೆಚ್ಚು ಪ್ರಕಾರಗಳಿವೆಯಾದರೂ ಹಲವು ನಶಿಸಿ 200 ಮಾತ್ರ ಪ್ರಚಲಿತದಲ್ಲಿವೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಬಿ.ಮಂಜಮ್ಮ ಜೋಗತಿ ಹೇಳಿದರು.

ತಾಲೂಕಿನ ಅಮೃತಾಪುರ ಗ್ರಾಮದಲ್ಲಿ ಶನಿವಾರ ಜಾನಪದ ಅಕಾಡೆಮಿಯಿಂದ ಏರ್ಪಡಿಸಿದ್ದ ಜನಪದ ಕಲಾಪ್ರಕಾರಗಳ ತರಬೇತಿ ಶಿಬಿರ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಜನಜೀವನದಲ್ಲಿ ಹಾಸುಹೊಕ್ಕಾಗಿರುವ ಜನಪದ ಕಲೆ ಅಳಿವಿನಂಚಿನಲ್ಲಿದೆ. ಆದರೆ ಸರ್ಕಾರ ಕಲಾವಿದರಿಗೆ ಸಂಭಾವನೆ ಕೊಟ್ಟು ಕಲೆ ಉಳಿಸುವ ಪ್ರಯತ್ನ ಮುಂದುವರಿಸಿದೆ. ಕಲೆಗೆ ಎಲ್ಲರನ್ನೂ ಬದುಕಿಸುವ ಶಕ್ತಿಯಿದೆ. ಕಲೆಗಾಗಿ ಕಲೆಯನ್ನು ಪೋಷಿಸದೆ ಬದುಕಿಗಾದರೂ ಆರಾಧಿಸಬೇಕು ಎಂದು ಸಲಹೆ ನೀಡಿದರು.

ಜಿಪಂ ಸದಸ್ಯ ಕೆ.ಆರ್.ಆನಂದಪ್ಪ ಮಾತನಾಡಿ, ಶಿಕ್ಷಣ ಹೆಚ್ಚಾದಂತೆ ಕಲೆ, ಸಾಹಿತ್ಯದ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಸರ್ಕಾರಿ ಶಾಲೆ ಮುಚ್ಚುವ ಸ್ಥಿತಿ ತಲುಪಿದೆ. ಇಂಗ್ಲಿಷ್ ಭಾಷೆ ವ್ಯಾಮೋಹ ನಮ್ಮತನವನ್ನು ಹಾಳುಮಾಡಿದೆ. ಟಿವಿ ಮಾಧ್ಯಮ ಜನಪದ ಕಲೆಗಳನ್ನು ನುಂಗಿಹಾಕಿದೆ. ಆದರೂ ಮಕ್ಕಳಲ್ಲಿ ಕಲೆ ಬಿತ್ತುವ ಕೆಲಸವಾಗಬೇಕು.

ಜಿಪಂ ಮಾಜಿ ಸದಸ್ಯ ಎ.ಸಿ.ಚಂದ್ರಪ್ಪ ಮಾತನಾಡಿ, ಹಳ್ಳಿಗಳು ಜನಪದ ಸಂಪತ್ತಿನ ಕಣಜ. ನೋವನ್ನು ತಣಿಸುವ ಶಕ್ತಿ ಜನಪದ ಕಲೆಗಿದೆ ಎಂದರು.

ತಹಸೀಲ್ದಾರ್ ಸಿ.ಜಿ.ಗೀತಾ ಮಾತನಾಡಿ, ಮಹಿಳೆಯರಿಗಾಗಿ ಏರ್ಪಡಿಸಿದ್ದ ಜನಪದ ಕಲಾಪ್ರಕಾರಗಳ ತರಬೇತಿ ಶಿಬಿರ ಅತ್ಯುಪಯುಕ್ತವಾಗಿದೆ. ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ತೊಡಗಿಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ. ಕಲೆ ಮೂಲಕ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಳ್ಳಬೇಕು ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ರಮೇಶ್, ರಾಜ್ಯ ಬಿದಿರು ಬೆಳೆಗಾರರ ಸಂಘದ ಅಧ್ಯಕ್ಷ ಎ.ಎಸ್.ಈಶ್ವರಪ್ಪ, ಜಾನಪದ ಅಕಾಡೆಮಿ ಸದಸ್ಯ ಸಂಚಾಲಕಿ ಎಸ್.ಜಿ.ಲಕ್ಷ್ಮೀದೇವಮ್ಮ, ಗ್ರಾಪಂ ಮಾಜಿ ಸದಸ್ಯ ಎ.ಎನ್.ಈಶ್ವರಪ್ಪ, ಶ್ರೀಗಂಧ ಬೆಳೆಗಾರ ಟಿ.ಎನ್.ವಿಶುಕುಮಾರ್, ರೈತ ಸಂಘದ ಮುಖಂಡ ಸೋಮಶೇಖರ್, ವಾಣಿ ಶ್ರೀನಿವಾಸ್, ಕಸಾಪ ಮಾಜಿ ತಾಲೂಕು ಅಧ್ಯಕ್ಷ ನಾಗೇನಹಳ್ಳಿ ಎಚ್.ತಿಮ್ಮಯ್ಯ, ಕಲಾವಿದ ಮಾಳೇನಹಳ್ಳಿ ಬಸಪ್ಪ, ಪಿಡಿಒ ಎನ್.ಕೆ.ಪವಿತ್ರಾ ಇತರರಿದ್ದರು.