ಜಿಲ್ಲೆ

ಬಿಹಾರಿ ಕಾರ್ಮಿಕರು ಸ್ವಗ್ರಾಮಗಳಿಗೆ ಕಳುಹಿಸುವಂತೆ ಕಾರ್ಮಿಕರ ಪಟ್ಟು

ಸೂಲಿಬೆಲೆ: ಹೊಸಕೋಟೆ ತಾಲೂಕಿನ ದೇವನಗೊಂದಿ ವ್ಯಾಪ್ತಿಯ ಕಾರ್ಖಾನೆಗಳಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಬಿಹಾರಿ ಕಾರ್ಮಿಕರು ಸ್ವಗ್ರಾಮಕ್ಕೆ ತೆರಳಲು ಪೊಲೀಸರ ಮುಂದೆ ಪಟ್ಟು ಹಿಡಿದರು.

ಈ ಭಾಗದ ವಿವಿಧ ಕಾರ್ಖಾನೆಗಳಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಸುಮಾರು 800 ಕಾರ್ಮಿಕರು ಗುರುವಾರ ಸ್ವಗ್ರಾಮಕ್ಕೆ ತೆರಳಬೇಕು. ನಮಗೆ ಅನುಮತಿ ಕೊಡಿ. ಬೆಂಗಳೂರಿನಿಂದ ರೈಲಿನ ಮೂಲಕ ಎಲ್ಲರನ್ನೂ ಕಳುಹಿಸುತ್ತಿದ್ದಾರೆ. ನಮ್ಮನ್ನು ಬೆಂಗಳೂರಿಗೆ ಹೋಗಲು ಬಿಡಿ. ಅಲ್ಲಿಂದ ರೈಲಿನಲ್ಲಿ ಊರಿಗೆ ತೆರಳುತ್ತೇವೆ ಎಂದು ಪಟ್ಟು ಹಿಡಿದರು.

ಈ ವೇಳೆ ಸ್ಥಳಕ್ಕಾಗಮಿಸಿದ ಟಾಸ್ಕ್ ಫೋರ್ಸ್ ಸಮಿತಿ ಮುಖ್ಯಸ್ಥ ಉದಯ್‌ಸಿಂಗ್, ಶೀಘ್ರವೇ ಎಲ್ಲರನ್ನು ಸ್ವಗ್ರಾಮಗಳಿಗೆ ತಲುಪಿಸುವ ವ್ಯವಸ್ಥೆ ಮಾಡುವುದಾಗಿ ತಿಳಿಸಿ ಸಮಾಧಾನಪಡಿಸಿದರು.

ಕಾರ್ಮಿಕರಿಗೆ ಕೆಲಸವಿದೆ. ಕಂಪನಿ ಸಂಬಳ ಸಹ ನೀಡುತ್ತಿದೆ. ದಾನಿಗಳ ನೆರವಿನಿಂದ ಆಹಾರದ ಕಿಟ್ ಕೊಡಿಸಲಾಗಿದೆ. ಆದರೂ ನಮಗೆ ಕೆಲಸ ಬೇಡ, ನಾವು ನಮ್ಮ ಸ್ವಗ್ರಾಮಕ್ಕೆ ತೆರಳಬೇಕು. ಕಳುಹಿಸಿಕೊಡಿ ಎಂದು ಪಟ್ಟುಹಿಡಿದ್ದಾರೆ ಎಂದು ಡಿವೈಎಸ್‌ಪಿ ಬಿ.ಎನ್.ಸಕ್ರಿ ತಿಳಿಸಿದರು.