ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂದ ಪದಾಧಿಕಾರಿಗಳು ಕೋಲಾರ ತಾಲೂಕು ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಖಜಾಂಚಿ ನಿತೀನ್​, ಪ್ರಧಾನ ಕಾರ್ಯದರ್ಶಿ ಮಂಜುನಾಥ್​ರೆಡ್ಡಿ, ಉಪಾಧ್ಯಕ್ಷರಾದ ರಾಜೇಶ್​, ವೈಷ್ಣವಿ ಇದ್ದರು. 
ಜಿಲ್ಲೆ

ಕಾರ್ಯದೊತ್ತಡ ಕಡಿಮೆಗೊಳಿಸಲು ಪಟ್ಟು

ಕೋಲಾರ ಡೆಸ್ಕ್

ಕೋಲಾರ: ಗ್ರಾಮ ಆಡಳಿತಾಧಿಕಾರಿಗಳ ಮೇಲಿನ ಕಾರ್ಯ ಒತ್ತಡ ಕಡಿಮೆ ಮಾಡುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ, ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂದ ಪದಾಧಿಕಾರಿಗಳು ನಗರದ ತಾಲೂಕು ಕಚೇರಿ ಎದುರು ಸೋಮವಾರ

ಪ್ರತಿಭಟನೆ ನಡೆಸಿದರು.

ಕೋಲಾರ ತಾಲೂಕು ಅಧ್ಯಕ್ಷ ಆರ್​.ಆನಂದ್​ ಕುಮಾರ್​ ಮಾತನಾಡಿ, ಸರ್ಕಾರದ ಜಮೀನು ಒತ್ತುವರಿ ತೆರವು ನಿಟ್ಟಿನಲ್ಲಿ ಮೊಬೈಲ್​ ಆ್ಯಪ್​ ಮೂಲಕ ಲ್ಯಾಡ್​ ಬೀಟ್​ ನಡೆಸಿ, ಜಮೀನಿನ ಗಡಿ ಗುರುತಿಸುವ ವೇಳೆ ಸಣ್ಣಪುಟ್ಟ ವ್ಯತ್ಯಾಸಗಳಾದರೂ ಶಿಸ್ತು ಕ್ರಮ ಜರುಗಿಸಲಾಗುತ್ತಿದೆ. ಜಮೀನಿನ ಹದ್ದು ಬಸ್ತು ಗುರುತಿಸುವುದು ಸರ್ವೇ ಇಲಾಖೆ ಕೆಲಸ. ಇದನ್ನು ಸರ್ವೇ ಇಲಾಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಬಗರ್​ ಹುಕ್ಕುಂ ಸಾಗುವಳಿಗೆ ಸಂಬಂಧಿಸಿದಂತೆ ಆ್ಯಪ್​ ಬಳಸಿ ಜಮೀನು ಮಂಜೂರಾಗಿರುವ ಕಡತಗಳನ್ನು ಆನ್​ಲೈನ್​ನಲ್ಲಿ ನಮೂದಿಸಲು ಸೂಚಿಸಿದ್ದು, ಈ ಬಗ್ಗೆ ಅಗತ್ಯ ತರಬೇತಿ ನೀಡಬೇಕು ಎಂದು ಕೋರಿದರು.

ಅಂತರ ಜಿಲ್ಲಾ ವರ್ಗಾವಣೆ, ಪತಿ-ಪತ್ನಿ ಪ್ರಕರಣದಲ್ಲಿ ವರ್ಗಾವಣೆಗೆ ಅವಕಾಶ ನೀಡಬೇಕು. ಕೇಂದ್ರ ಸ್ಥಾನದಲ್ಲಿದ್ದು, ಕಾರ್ಯ ನಿರ್ವಹಿಸಲು ಸಹಕಾರವಾಗುವಂತೆ ವಸತಿಗೃಹ ನಿರ್ಮಿಸಬೇಕು. ಪಂಚಾಯತ್​ ರಾಜ್​ ಅಧಿಕಾರಿಗಳ ಬದಲಾಗಿ, ಕಂದಾಯ ಇಲಾಖೆ ಅಧಿಕಾರಿಗಳಡಿ ಕೆಲಸ ನಿರ್ವಹಿಸಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಸೇವಾ ಅನುಭವದ ಮೇರೆಗೆ ಪದೋನ್ನತ್ತಿಗೆ ಅವಕಾಶ ನೀಡಬೇಕು. ಕುಂದುಕೊರತೆ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕೆಲಸ ಕಾಲಕಾಲಕ್ಕೆ ಆಗಬೇಕು. ಪ್ರಯಾಣ ಭತ್ಯೆ 500 ರೂ.ಗಳಿಂದ 5 ಸಾವಿರಕ್ಕೆ ಹೆಚ್ಚಿಸಬೇಕು. ಮನೆ ಹಾನಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಾಥಮಿಕ ವರದಿ ಮಾಡುವ ಜವಾಬ್ದಾರಿ ನಿರ್ವಹಿಸುವಂತೆ ಆದೇಶಿಸಬೇಕು ಎಂದು ಒತ್ತಾಯಿಸಿದರು.

ವಂಶ ವೃಕ್ಷ, ಜಾತಿ ಪ್ರಮಾಣ ಪತ್ರ, ಇತರೆ ಪ್ರಮಾಣ ಪತ್ರಗಳ ವಿತರಣೆ ವಿಚಾರವಾಗಿ, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಿ ಪ್ರಕರಣ ದಾಖಲಿಸುತ್ತಿರುವುದನ್ನು ನಿಲ್ಲಿಸಬೇಕು, ತಪು$್ಪ ಮಾಹಿತಿ ನೀಡುವ ಅರ್ಜಿದಾರರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಪ್ರಕರಣ ದಾಖಲಿಸಬೇಕು ಎಂದು ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಖಜಾಂಚಿ ನಿತೀನ್​, ಪ್ರಧಾನ ಕಾರ್ಯದರ್ಶಿ ಮಂಜುನಾಥ್​ರೆಡ್ಡಿ, ಉಪಾಧ್ಯಕ್ಷರಾದ ರಾಜೇಶ್​, ವೈಷ್ಣವಿ ಇದದರು.