ಜಿಲ್ಲೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಪಟ್ಟು

ಗಂಗಾಧರ ಬಿ ವಿ

* ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದಿಂದ ಪ್ರತಿಭಟನೆ

ರಾಮನಗರ: ಐಸಿಡಿಎಸ್ ಯೋಜನೆ ಜಾರಿಗೆ ಪ್ರತ್ಯೇಕ ನಿರ್ದೇಶನಾಲಯ ತೆರೆಯುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪುಷ್ಪಲತಾ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಪ್ರಾರಂಭವಾಗಿ 50 ವರ್ಷಗಳು ಸಮೀಪಿಸುತ್ತಿವೆ. 2013ರ ಆಹಾರ ಭದ್ರತಾ ಕಾಯ್ದೆ, 2009ರ ಕಡ್ಡಾಯ ಶಿಕ್ಷಣ ಕಾಯ್ದೆಗಳನ್ನು ಅಂಗನವಾಡಿ ಕೇಂದ್ರಗಳ ಮೂಲಕ ಅಂಗನವಾಗಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಜಾರಿ ಮಾಡುತ್ತಿದ್ದಾರೆ ಎಂದು ಹೇಳಿದರು.

ದೇಶದ ಅಭಿವೃದ್ಧಿಗೆ ಪೂರಕವಾದ ಮಾನವ ಸಂಪನ್ಮೂಲಗಳನ್ನು ಅಪೌಷ್ಠಿಕತೆ, ಅಂಗವೈಕಲ್ಯತೆಗಳಿಂದ ಕಾಪಾಡಿ, ಮಾನಸಿಕ ಮತ್ತು ದೈಹಿಕವಾಗಿ ಬೆಳಸುವ ಕೆಲಸವನ್ನು ಅಂಗನವಾಡಿಗಳ ಮೂಲಕ ಮಾಡಲಾಗುತ್ತಿದೆ.

ಸುಪ್ರೀಂಕೋರ್ಟ್ ಮತ್ತು ಗುಜರಾತ್ ಹೈಕೋರ್ಟ್ ಅಂಗನವಾಡಿ ಕಾರ್ಯಕರ್ತೆಯರನ್ನು 3 ಮತ್ತು 4ನೇ ಗ್ರೇಡ್ ನೌಕರರನ್ನಾಗಿ ಪರಿಗಣಿಸಲು ಜಂಟೀ ನಿಯಮಗಳನ್ನು ರೂಪಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚನೆಯನ್ನು ನೀಡಿದೆ. ಆದರೆ, ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳನ್ನು ಬಲ ಹೀನಗೊಳಿಸಲು ಶಿಕ್ಷಣ ಇಲಾಖೆ ನಾಲ್ಕು ವರ್ಷದ ಮೇಲ್ಪಟ್ಟ ಮಕ್ಕಳನ್ನು ಸ್ಥಳಾಂತರಿಸಲು ಬೇರೆ ಬೇರೆ ರೂಪದಲ್ಲಿ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಅಂಗವಾಡಿ ಕೇಂದ್ರಗಳನ್ನೇ ಪೂರ್ವ ಪ್ರಾಥಮಿಕ ಶಿಕ್ಷಣ ಕೇಂದ್ರಗಳಾಗಿ ಪರಿವರ್ತಿಸಲು ಸರ್ಕಾರ ತೀರ್ಮಾನ ಕೈಗೊಂಡಿರುವುದು ಸ್ವಾಗತಾರ್ಹವಾಗಿದೆ. ಇದೊಂದು ಐತಿಹಾಸಿಕ ತೀರ್ಮಾನವಾಗಿದ್ದು, ಇದರ ಮೇಲ್ವಿಚಾರಣೆಗೆ ಐಸಿಡಿಎಸ್ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪನೆ ಮಾಡಬೇಕು. ಜತೆಗೆ ಆರ್ಥಿಕ ನೆರವು ನೀಡಬೇಕು ಎಂದು ಕೋರಿಕೊಂಡರು. ಅಲ್ಲದೆ, ಈಗಲೂ ಸಂಕಷ್ಟದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದು, ರಾಜ್ಯ ಸರ್ಕಾರ ನಮ್ಮ ಎಲ್ಲ ಬೇಡಿಕೆಗಳಿಗೆ ಸ್ಪಂಧಿಸಬೇಕು ಎಂದು ಮನವಿ ಮಾಡಿದರು.

ಪ್ರಮುಖ ಬೇಡಿಕೆಗಳು * ಕೂಡಲೇ ಗ್ರಾಚ್ಯುಟಿ ಹಣ ಬಿಡುಗಡೆ ಮಾಡಬೇಕು * ಕೇಂದ್ರ ಸರ್ಕಾರ 26 ಸಾವಿರ ರೂ ಮತ್ತು ರಾಜ್ಯ ಸರ್ಕಾರ 15 ಸಾವಿರ ರೂ ಗೌರವ ಧನ ಹೆಚ್ಚಿಸಬೇಕು * ನಿವೃತ್ತರಾದವರಿಗೆ ಇಡಿಗಂಡು ಅಥವಾ ಎನ್‌ಪಿಎಸ್ ಹಣ ಮತ್ತು 10 ಸಾವಿರ ಮಾಸಿಕ ಪಿಂಚಣಿ ನೀಡಬೇಕು * ಅಂಗನವಾಡಿ ಕೇಂದ್ರಗಳನ್ನೇ ಮೇಲ್ದರ್ಜೆಗೇರಿಸಿ ಎಲ್‌ಕೆಜಿ ಯುಕೆಜಿ ಪ್ರಾರಂಭಿಸಬೇಕು * ಬಿಎಲ್‌ಒ ಕೆಲಸಗಳಿಗೆ ಮುಕ್ತಿ ನೀಡಬೇಕು * ಸಾಮೂಹಿಕ ವಿಮೆಯನ್ನು ಕೂಡಲೇ ಜಾರಿಗೊಳಿಸಬೇಕು * ಅಂಗನವಾಡಿ ಕೇಂದ್ರಗಳಿಗೆ ನೀಡುವ ಪೂಕರ ಪೌಷ್ಠಿಕ ಆಹಾರಕ್ಕೆ ಜಿಎಸ್‌ಟಿ ವಿಧಿಸಬಾರದು. * ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಕರ್ಯ ಒದಗಿಸಬೇಕು