ಚಳ್ಳಕೆರೆ: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ಖಂಡಿಸಿ ಶುಕ್ರವಾರ ವಸುಂಧರ ಶಿಕ್ಷಣ ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪದಾಧಿಕಾರಿಗಳು ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ರೇಹಾನ್ ಪಾಷಾ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಮಳೆಯ ಕೊರತೆಯಿಂದ 169 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಕಾವೇರಿ ನದಿ ನೀರಿನ ಮಟ್ಟ ತೀವ್ರ ಕುಸಿತ ಕಂಡಿದೆ. ಪ್ರಮುಖ ನಗರಗಳಿಗೆ ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗಳ ಅನುಕೂಲಕ್ಕೆ ಕಾವೇರಿ ನೀರು ಸೀಮಿತವಾಗಬೇಕು ಎಂದು ಆಗ್ರಹಿಸಿದರು.
ತಮಿಳುನಾಡಿಗೆ ನೀರು ಹರಿಸುವ ಅವೈಜ್ಞಾನಿಕ ಒಪ್ಪಂದವನ್ನು ಕೂಡಲೇ ರದ್ದುಪಡಿಸಲು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು. ರಾಜ್ಯ ಸರ್ಕಾರ ತುರ್ತಾಗಿ ವಿಧಾನಸಭೆಯ ವಿಶೇಷ ಸಭೆ ನಡೆಸಿ ನದಿ ನೀರು ಕಾಪಾಡಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ತಮಿಳುನಾಡಿನ ರಾಜಕಾರಣ ಕೇಂದ್ರ ಸರ್ಕಾರದ ಮೇಲೆ ಹಿಡಿತ ಸಾಧಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯವಾಗಿದೆ. ಇಂತಹ ಕೆಟ್ಟ ರಾಜಕಾರಣ ಕೊನೆಯಾಗಬೇಕು ಎಂದರು.
ರಾಜ್ಯದ ಬರಗಾಲ ಪರಿಸ್ಥಿತಿ ನಿರ್ವಹಣೆಗೆ ಶಾಶ್ವತ ಪರಿಹಾರವಾಗಿ ಕೆರೆಗಳಲ್ಲಿ ಮಳೆ ನೀರು ನಿಲ್ಲುವಂತೆ ಮತ್ತು ನೀರಾವರಿ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಸಾಮಾಜಿಕ ಹೋರಾಟಗಾರ ಎಸ್.ಎಚ್.ಸೈಯದ್, ಸಂಸ್ಥೆಯ ಅಧ್ಯಕ್ಷ ಕೊರ‌್ಲಕುಂಟೆ ತಿಪ್ಪೇಸ್ವಾಮಿ, ಕಾರ್ಯದರ್ಶಿ ಕೆ.ಉಜ್ಜಿನಪ್ಪ, ಪದಾಧಿಕಾರಿಗಳಾದ ಎಚ್.ಲಂಕಪ್ಪ, ಪಿ.ಡಿ.ಮಂಜುನಾಥ, ಆರ್.ಮಂಜುನಾಥ, ಪಿ.ಡಿ.ರುದ್ರಮುನಿ, ನೇತಾಜಿ ಪ್ರಸನ್ನ, ಡಿ.ಬಿ.ಆನಂದಕುಮಾರ್, ವಿ.ಬೆಟ್ಟಪ್ಪ, ಮೈತ್ರಿ ದ್ಯಾಮಣ್ಣ, ಎಂ.ಎಚ್.ಸ್ವಾಮಿ, ಟಿ.ಅವಿನಾಶ, ಆರ್.ದೇವೇಂದ್ರಪ್ಪ ಇತರರಿದ್ದರು.
ಸಾರಿಗೆ ಬಸ್‌ಗಳ ಸಂಚಾರ ಸ್ಥಗಿತ: ಚಳ್ಳಕೆರೆ ತಾಲೂಕಿನಲ್ಲಿ ಸಾರಿಗೆ ಬಸ್‌ಗಳ ಸಂಚಾರ ಮಾತ್ರ ಸ್ಥಗಿತವಾಗಿತ್ತು. ಉಳಿದಂತೆ ಖಾಸಗಿ ಬಸ್, ಆಟೋಗಳ ಸಂಚಾರ ಸೇವೆ ಕಂಡು ಬಂತು. ಅದೇ ರೀತಿ ಎಂದಿನಂತೆ ವ್ಯಾಪಾರ ವಹಿವಾಟುಗಳ ಅಂಗಡಿ ಮುಂಗಟ್ಟುಗಳನ್ನು ತೆರೆಯಲಾಗಿತ್ತು. ರಸ್ತೆ ಬದಿಯ ವ್ಯಾಪಾರ ಕಾರ್ಯಚಟುವಟಿಕೆಗಳು ಎಂದಿನಂತೆ ಕಂಡು ಬಂದವು. ಆದರೂ, ಮುಂಜಾಗ್ರತಾ ಕ್ರಮವಾಗಿ ನೆಹರು ವೃತ್ತ ಸೇರಿ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸ್ ಭದ್ರತೆ ಮಾಡಲಾಗಿತ್ತು.