officers visit 
ಜಿಲ್ಲೆ

ಮೇವಿನ ಬರ ನಿರ್ವಹಣೆಗೆ ಕ್ರಿಯಾಯೋಜನೆ

ಶಿವರಾಜ.ಎಂ

ಹಸಿರು ಮೇವು ಖರೀದಿಗೆ ಬೈ ಬ್ಯಾಕ್

ಗೋಶಾಲೆಗಳಿಗೆ 5 ಲಕ್ಷ ರೂ.ಅನುದಾನ


ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಮಳೆಯ ತೀವ್ರ ಕೊರತೆಯಿಂದ ಜಿಲ್ಲೆಯಲ್ಲಿ ಬರ ತಾಂಡವಾಡುತ್ತಿದ್ದು ಜಾನುವಾರು ಮೇವಿಗೆ ತತ್ಪಾರ ಎದುರಾಗಲಿರುವ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಯಂತೆ ಜಿಲ್ಲಾ ಪಶುಪಾಲನ ಇಲಾಖೆ ಮೇವಿನ ಬರ ನಿರ್ವಹಣೆಗೆ ಹಲವು ಕ್ರಿಯಾಯೋಜನೆಗಳನ್ನು ರೂಪಿಸಿದೆ.
ಕೃಷಿ ಚಟುವಟಿಕೆಯೊಂದಿಗೆ ಹೈನುಗಾರಿಕೆಯಲ್ಲೂ ಜಿಲ್ಲೆ ಮುಂಚೂಣಿಯಲ್ಲಿದ್ದು, ಜಾನುವಾರು ಮೇವಿನ ಕೊರತೆ ಹೈನೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಕಾರಣಕ್ಕೆ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಮೇವಿನ ದಾಸ್ತಾನು ವಸ್ತುಸ್ಥಿತಿ ಪರಿಶೀಲಿಸಿರುವ ಪಶುಪಾಲನಾ ಇಲಾಖೆ ಪ್ರಸ್ತುತ 321618 ಮೆಟ್ರಿಕ್ ಟನ್ ಮೇವು ಲಭ್ಯವಿದ್ದು, ಇನ್ನೂ 37 ವಾರಗಳವರೆಗೆ ಮೇವಿಗೆ ಕೊರತೆಯಾಗುವುದಿಲ್ಲ ಎಂದು ವರದಿ ಸಿದ್ದಪಡಿಸಿದೆ. ಇಲಾಖೆಯ ಅಂದಾಜಿನಂತೆ ಜೂನ್ ಅಂತ್ಯದವರೆಗೆ ಜಾನುವಾರುಗಳಿಗೆ ಮೇವು ಹಾಗೂ ಕುಡಿವ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ವರದಿ ನೀಡಿದೆ.
ಟಿಕ್ನಿಕಲ್ ಬಿಡ್ ಟೆಂಡರ್: ಜೂನ್ ನಂತರವೂ ನಿರೀಕ್ಷಿಯಂತೆ ಮಳೆಯಾಗದೆ ಜಾನುವಾರು ಮೇವಿಗೆ ತೊಂದರೆ ಎದುರಾದರೆ ಮುಂಜಾಗ್ರತಾ ಕ್ರಮವಾಗಿ ಮೇವು ದಾಸ್ತಾನಿಗೆ ಟಿಕ್ನಿಕಲ್ ಬಿಡ್ ಟೆಂಡರ್ ಕರೆಯಲಾಗಿದೆ. ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಏಪ್ರಿಲ್ ಅಥವಾ ಮೇ ತಿಂಗಳ ಆರಂಭದಲ್ಲಿ ಟೆಂಡರ್ ೈನಲ್ ಆಗಲಿದೆ ಎಂದು ಇಲಾಖೆ ತಿಳಿಸಿದೆ. ನೆರೆ ಹೊರೆಯ ಜಿಲ್ಲೆ ಸೇರಿ ಇನ್ನಿತರ ಭಾಗದಲ್ಲಿ ಎಲ್ಲಿ ಮೇವಿನ ಲಭ್ಯತೆ ಇದೆ ಎಂಬುದನ್ನು ಅಂದಾಜು ಮಾಡಿ ಅಲ್ಲಿಂದಲೇ ಮೇವು ಖರೀದಿಸಿ ಜಿಲ್ಲೆಯ ಹೈನುಗಾರರಿಗೆ ವಿತರಿಸಲು ಇಲಾಖೆ ಈಗಾಗಲೇ ಮಾನಿಟರಿಂಗ್ ಮಾಡುತ್ತಿದೆ.
51278 ಮಿನಿಕಿಟ್ ವಿತರಣೆ: ಎದುರಾಗಬಹುದಾದ ಮೇವಿನ ಸಮಸ್ಯೆ ಸರಿದೂಗಿಸಲು ಈಗಾಗಲೇ ಜಿಲ್ಲಾದ್ಯಂತ ಪಶುಪಾಲನಾ ಇಲಾಖೆ ವತಿಯಿಂದ 42476 ಮೇವಿನ ಮಿನಿಕಿಟ್‌ಗಳನ್ನು ಉಚಿತವಾಗಿ ವಿತರಿಸಲಾಗಿದೆ, ಇದರ ಜತೆಗೆ ಕೆಎಂಎ್ನಿಂದ ರೈತರು 8802 ಮೇವಿನ ಮಿನಿಕಿಟ್ ಖರೀದಿಸಿದ್ದು ಮೇವು ಕೊರತೆ ನೀಗಿಸುವಲ್ಲಿ ಸಹಕಾರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೇವಿನ ಕಿಟ್ ಜತೆಗೆ ಮೇವಿನ ಕಿರುಪೊಟ್ಟಗಳನ್ನು ವಿತರಿಸಿದ್ದು 88874 ಮೆಟ್ರಿಕ್ ಟನ್ ಹಸಿರು ಮೇವು ಉತ್ಪಾದನೆಯಾಗಲಿದೆ ಎಂದು ಇಲಾಖೆ ಅಂದಾಜಿಸಿದ್ದು ಮೇವಿನ ಬರ ನೀಗಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.
ಹಸಿರು ಮೇವು ಖರೀದಿ: ಮೇವಿನ ಅಭಾವ ನೀಗಿಸಲು ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಇಲಾಖೆ ಸರ್ಕಾರದ ಯೋಜನೆಯನ್ವಯ ಆಸಕ್ತ ರೈತರು ಸ್ವಂತ ನೀರಾವರಿ ಸೌಲಭ್ಯವಿರುವ ಜಮೀನುಗಳಲ್ಲಿ ಹಸಿರು ಮೇವು ಬೆಳೆದಲ್ಲಿ ಸರ್ಕಾರದಿಂದ ಖರೀದಿ ಮಾಡುವ ( ಬೈ ಬ್ಯಾಕ್) ಮಾಡಬಹುದಾದ ಯೋಜನೆ ರೂಪಿಸಿದ್ದು, ಈ ಬಗ್ಗೆ ರೈತರಲ್ಲಿ ಸಾಕಷ್ಟು ಪ್ರಚಾರ ಮಾಡಲಾಗುತ್ತಿದೆ. ನೀರಾವರಿ ಸೌಲಭ್ಯ ಹೊಂದಿರುವ ರೈತರಿಗೆ ಮೇವು ಬೆಳೆಯುವಂತೆ ಪಶುಪಾಲನ ಇಲಾಖೆ ಅಧಿಕಾರಿಗಳು ಪ್ರೋತ್ಸಾಹಿಸುತ್ತಿದ್ದು ಸರ್ಕಾರದ ವತಿಯಿಂದ ಉತ್ತಮ ದರದಲ್ಲಿ ಮೇವು ಖರೀದಿಸುವ ಭರವಸೆ ನೀಡಿದೆ.
ಗೋಶಾಲೆಗಳಲ್ಲಿ 100 ಮೆಟ್ರಿಕ್ ಟನ್: ಸರ್ಕಾರದ ಆದೇಶದಂತೆ ಸರ್ಕಾರಿ ಗೋಶಾಲೆಗಳಲ್ಲಿ ಅಂದಾಜು 100 ಮೆಟ್ರಿಕ್ ಟನ್ ಮೇವು ಸಂಗ್ರಹಿಸಲು 5 ಲಕ್ಷ ರೂ.ಅನುದಾನ ಬಿಡುಗಡೆಯಾಗಿದ್ದು, ಅದನ್ನು ಈಗಾಗಲೇ ಎಸ್‌ಪಿಸಿಎ ಖಾತೆಯಲ್ಲಿ ಇಡಲಾಗಿದೆ. ಇ-ಟೆಂಡರ್ ಮೂಲಕ ಅವಶ್ಯಕತೆಗನುಗುಣವಾಗಿ ನಿಯಮಾನುಸಾರ ಮೇವು ಖರೀದಿಸಿ ಜಾನುವಾರುಗಳಿಗೆ ಒದಗಿಸಲು ಇಲಾಖೆ ಸನ್ನದ್ಧವಾಗಿದೆ. ಜಿಲ್ಲೆಯಲ್ಲಿರುವ ಭೂರಹಿತ ಹೈನುಗಾರರನ್ನು ಗ್ರಾಮವಾರು ಗುರುತಿಸಲಾಗಿದ್ದು ಇವರಿಗೆ ಮುಂದಿನ ದಿನಗಳಲ್ಲಿ ಮೇವಿನ ಕೊರತೆಯಂಟಾದರೆ ಅಂಥವರಿಗೆ ಮೇವು ಪೂರೈಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.
ಒಣ ಮೇವಿನ ಲಭ್ಯತೆ:

ಕೃಷಿ ಇಲಾಖೆ ಮಾಹಿತಿಯಂತೆ ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 56513 ಹೆಕ್ಟೇರ್ ರಾಗಿ, 6756 ಹೆಕ್ಟೇರ್ ಮುಸುಕಿನ ಜೋಳ ಹಾಗೂ 61 ಹೆಕ್ಟೇರ್ ಭತ್ತ ಬಿತ್ತನೆಯಾಗಿದ್ದು ರಾಗಿ ಬೆಳೆಯಿಂದಲೇ 190274 ಟನ್ ಒಣ ಮೇವು ಲಭ್ಯವಿದೆ ಎನ್ನಲಾಗಿದ್ದು ಜೂನ್ ಅಂತ್ಯದವರೆಗೆ ಒಣಮೇವಿನ ಕೊರತೆ ಎದುರಾಗುವುದರಿಲ್ಲ ಎಂಬ ಭರವಸೆ ಇಲಾಖೆಯದ್ದಾಗಿದೆ.


ಜಿಲ್ಲೆಯಲ್ಲಿ ಇಲಾಖೆ ಅಧಿಕಾರಿಗಳ ತಂಡ ಖುದ್ದು ಪರಿಶೀಲನೆ ನಡೆಸಿದ್ದು ಪ್ರಸ್ತುತ 321618 ಮೆಟ್ರಿಕ್ ಟನ್ ಮೇವು ಲಭ್ಯವಿದ್ದು, ಇನ್ನೂ 37 ವಾರಗಳವರೆಗೆ ಮೇವಿಗೆ ಕೊರತೆಯಾಗುವುದಿಲ್ಲ. ಅಲ್ಲದೆ ಮೇವಿನ ಮಿನಿಕಿಟ್ ವಿತರಿಸಿರುವುದರಿಂದ ಹಸಿರು ಮೇವಿಗೂ ತೊಂದರೆಯಿಲ್ಲ. ನೀರಾವರಿ ಸೌಲಭ್ಯವಿರುವ ರೈತರಿಗೆ ಮೇವು ಬೆಳೆಯುವಂತೆ ಪ್ರೋತ್ಸಾಹ ನೀಡುತ್ತಿದ್ದು ಅವರಿಂದ ಮೇವು ಖರೀದಿಸುವ ಸಂಬಂಧ ಮಾತುಕತೆ ಮಾಡಲಾಗಿದೆ. ಅಲ್ಲದೆ ಮೇವಿನ ಕೊರತೆ ಎದುರಾಗದಂತೆ ಮೇವು ಖರೀದಿಗೆ ಟೆಂಟರ್ ಪ್ರಕ್ರಿಯೆ ನಡೆಸಲಾಗಿದೆ.
ಜಗದೀಶ್, ಉಪನಿರ್ದೇಶಕ ಪಶುಪಾಲನಾ ಇಲಾಖೆ ಬೆಂ.ಗ್ರಾಮಾಂತರ