ಜಿಲ್ಲೆ

ಮೇವಿನ ಕೊರತೆ ಸಂಭವ

ವೀರೇಶ ಸೌದ್ರಿ

ಬ್ಯಾಡಗಿ: ತಾಲೂಕಿನಲ್ಲಿ ವಾಡಿಕೆಗಿಂತ ಮಳೆಯ ಪ್ರಮಾಣ ಶೇ. 50 ರಷ್ಟು ಕೊರತೆಯಿಂದ ಬಿತ್ತಿದ ಬೆಳೆ ಬಾರದಂತಾಗಿದೆ.

ತಾಲೂಕಿನ ಕಾಗಿನೆಲೆ, ಬ್ಯಾಡಗಿ ಹೋಬಳಿ ಪ್ರದೇಶದಲ್ಲಿ ಒಟ್ಟು 32 ಸಾವಿರ ಹೆಕ್ಟೇರ್ ಕೃಷಿ ಭೂಮಿಯಿದ್ದು, ಈ ಪೈಕಿ 25 ಸಾವಿರ ಹೆಕ್ಟೇರ್ ಗೋವಿನಜೋಳ ಬಿತ್ತನೆ ಮಾಡಲಾಗಿತ್ತು. ಇದರಲ್ಲಿ ಶೇ. 80ರಷ್ಟು ಮಳೆಯಾಶ್ರಿತ ಗೋವಿನಜೋಳ ಬೆಳೆಗೆ ಭಾಗಶಃ ಹಾನಿಯಾಗಿದೆ. ಇನ್ನುಳಿದ 4 ಸಾವಿರ ಹೆಕ್ಟೇರ್ ಕೊಳವೆ ಬಾವಿ ಆಶ್ರಿತ ನೀರಾವರಿ ಬೆಳೆಯಿದೆ.

ಪ್ರಸಕ್ತ ವರ್ಷದ ನವೆಂಬರ್‌ವರೆಗೂ ಜಾನುವಾರುಗಳಿಗೆ ಮೇವಿನ ಕೊರತೆ ಆಗದು. ಆದರೆ, ಗೋವಿನಜೋಳ ಬೆಳೆಯಿಲ್ಲದ ಕಾರಣ ವಾರ್ಷಿಕವಾಗಿ ಸಂಗ್ರಹವಾಗಬೇಕಿದ್ದ ಮೇವು ಲಭ್ಯವಿಲ್ಲ. ಅಲ್ಲದೆ, ಭತ್ತವೂ ಸಮರ್ಪಕವಾಗಿ ಬೆಳೆದಿಲ್ಲ. ಹೀಗಾಗಿ ರೈತರು ಜಾನುವಾರು ಸಾಕಣೆ ಕಷ್ಟಕರ ಎನ್ನಲಾಗುತ್ತಿದೆ.
ಬೆಳೆ ಹಾನಿ ಕುರಿತ ಅರ್ಜಿ ಸಲ್ಲಿಸಿ 72 ಗಂಟೆಯಲ್ಲಿ ಪರಿಹಾರ ವಿತರಣೆ ಪ್ರಕ್ರಿಯೆ ಆರಂಭಿಸಬೇಕು. ಅರ್ಜಿ ಸಲ್ಲಿಸಿದ್ದಲ್ಲಿ ಶೇ. 25 ಮಧ್ಯಂತರ ಪರಿಹಾರ ವಿಮೆ ನೀಡಬೇಕಿದೆ. ಆದರೆ, ವಿಮೆ ಕಂಪನಿಗಳು ಸ್ಥಳೀಯ ಅಧಿಕಾರಿಗಳ ನೆರವು ಪಡೆದು, ತಮಗೆ ಅನುಕೂಲವಾಗುವಂತ ಕೆಲ ಹೊಲಗಳಿಗೆ ತೆರಳಿ ಹಾನಿ ಪ್ರಮಾಣ ಕಡಿಮೆಯಾಗುವಂತೆ ವರದಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪವಿದೆ.

ತಾಲೂಕಿನಲ್ಲಿ ಬರ ಉಂಟಾದರೂ ಸರ್ಕಾರ ಈವರೆಗೂ ನಯಾಪೈಸೆ ಪರಿಹಾರ ಕಾಮಗಾರಿ ನಡೆಸಿಲ್ಲ. ಜನಪ್ರತಿನಿಧಿಗಳು ತಾಲೂಕನ್ನು ಬರಪೀಡಿತ ಪ್ರದೇಶ ಪಟ್ಟಿಗೆ ಸೇರಿಸಲು ಒತ್ತಾಯ ಮಾಡುತ್ತಿಲ್ಲ. ಕೂಲಿಯೂ ಇಲ್ಲ, ಬೆಳೆಯೂ ಇಲ್ಲದೆ ರೈತಕುಲ ಸಂಕಷ್ಟದಲ್ಲಿ ಮುಳುಗಿದೆ.Iಕಿರಣ ಗಡಿಗೋಳ , ರೈತ ಬೆಳೆ ಹಾನಿ ಕುರಿತು ಆಣೆವಾರು ಮಾಹಿತಿಯನ್ನು ಕೃಷಿ ಇಲಾಖೆ ಸರ್ಕಾರಕ್ಕೆ ಕಳುಹಿಸಿದೆ. ಪ್ರಕೃತಿ ವಿಕೋಪ ನಿಧಿಯಡಿ ತಹಸೀಲ್ದಾರ್ ಖಾತೆಯಲ್ಲಿ ಸುಮಾರು 50 ಲಕ್ಷ ರೂ. ಉಳಿದಿದೆ. ಇದನ್ನು ತುರ್ತಾಗಿ ಬಳಸಲು ಅವಕಾಶವಿದೆ. ನೀರಿನ ಕೊರತೆಯಿರುವ ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು, ನೀರು ಪೂರೈಸಲು ಸೂಚಿಸಿದೆ. ಈ ಕುರಿತು ಸ್ಥಳೀಯ ಶಾಸಕರು ಹಾಗೂ ತಾಪಂ ಇಒ, ಪಿಡಿಒ ಜಂಟಿ ಸಭೆ ನಡೆಸಲಾಗಿದೆ.I ಎಸ್.ವಿ. ಪ್ರಸಾದ, ಬ್ಯಾಡಗಿ ತಹಸೀಲ್ದಾರ್