ಜನವರಿ, ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಜಾನುವಾರುಗಳಿಗೆ ಮೇವಿನ ಪೂರೈಕೆಗೆ ಅನುಕೂಲವಾಗುವಂತೆ ರಾಜ್ಯಾದ್ಯಂತ 7,63,000 ಮೇವಿನ ಬೀಜದ ಕಿಟ್‌ಗಳನ್ನು ವಿತರಿಸಲಾಗಿದೆ. ಈ ಕಿಟ್‌ಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಾರದರ್ಶಕವಾಗಿ ವಿತರಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ನಗರದ ಪ್ರಾದೇಶಿಕ ಆಯುಕ್ತರ ಕಚೇರಿ ಆವರಣದಲ್ಲಿರುವ ಚಾಮುಂಡೇಶ್ವರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈ ಕೆಲಸಕ್ಕೆ ಹಾಲು ಉತ್ಪಾದಕರ ಸಹಕಾರ ಸಂಘದ ಸಹಾಯ ಪಡೆದುಕೊಳ್ಳಿ ಎಂದು ಹೇಳಿದರು.
ಕಂದಾಯ ಇಲಾಖೆಗೆ ಸೇರದ ಕಾರಣ ಕಂದಾಯೇತರ ಜನವಸತಿ ನಿವಾಸಿಗಳು ಅಭಿವೃದ್ಧಿ ಯೋಜನೆಗಳಿಂದ ವಂಚಿತರಾಗುತ್ತಿದ್ದರು. ಹೀಗಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ತಾಂಡ-ಗೊಲ್ಲರಹಟ್ಟಿ ಸೇರಿದಂತೆ ಪ್ರದೇಶಗಳನ್ನು ಕಂದಾಯ ಗ್ರಾಮ ಎಂದು ಘೋಷಿಸಲು ಅನುವು ಮಾಡಿಕೊಡಲಾಗಿತ್ತು. ಮೈಸೂರು ಜಿಲ್ಲೆಯಲ್ಲಿ ಒಟ್ಟು 110 ಕಂದಾಯ ಗ್ರಾಮಗಳನ್ನು ಗುರುತಿಸಲಾಗಿದೆ. ಆದರೆ, ಈವರೆಗೆ 52 ಗ್ರಾಮಗಳಿಗೆ ಮಾತ್ರ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಬಾಕಿ ಉಳಿದ ಗ್ರಾಮಗಳನ್ನೂ ಶೀಘ್ರವಾಗಿ ಕಂದಾಯ ಗ್ರಾಮಗಳೆಂದು ಘೋಷಿಸಿ ಎಂದರು.
ಜಿಲ್ಲೆಯಲ್ಲಿ ಒಟ್ಟಾರೆ 20163 ಮನೆಗಳಿಗೆ ಹಕ್ಕುಪತ್ರ ನೀಡಬೇಕಿದ್ದು, 2884 ಮನೆಗಳಿಗೆ ಮಾತ್ರ ಹಕ್ಕುಪತ್ರ ನೀಡಲಾಗಿದೆ. ಹೀಗಾಗಿ ಉಳಿದ ಮನೆಗಳಿಗೂ ಶೀಘ್ರ ಹಕ್ಕುಪತ್ರ ನೀಡಲು ಕ್ರಮವಹಿಸಿ. ಅಲ್ಲದೆ, ಮತ್ತಷ್ಟು ಅರ್ಹ ಗ್ರಾಮಗಳಿದ್ದರೆ, ಸರ್ಕಾರಕ್ಕೆ ಶೀಘ್ರ ಪ್ರಸ್ತಾವನೆ ಸಲ್ಲಿಸಿ ಬಡವರ ಪರವಾಗಿ ಕೆಲಸ ಮಾಡಿ ಎಂದರು.