ಜಿಲ್ಲೆ

ಗುರಿಯತ್ತ ಗಮನ, ಆರೋಗ್ಯದತ್ತ ಕಾಳಜಿ ಇರಲಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಎಸ್‌ಎಸ್‌ಎಲ್‌ಸಿ ಹಂತ ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟ. ವಿದ್ಯಾರ್ಥಿಗಳು ಗುರಿಯತ್ತ ಗಮನ ಹರಿಸಬೇಕು. ಆರೋಗ್ಯದತ್ತ ಕಾಳಜಿ ವಹಿಸಬೇಕು ಎಂದು ಕರ್ನಾಟಕ ವನ್ಯಜೀವಿ ಮಂಡಳಿ ಸದಸ್ಯೆ ವೈಶಾಲಿ ವಿನಯ ಕುಲಕರ್ಣಿ ಹೇಳಿದರು.

ನಗರದ ಮುರುಘಾಮಠದ ಶ್ರೀ ಮೃತ್ಯುಂಜಯ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ವೈಶುದೀಪ ಫೌಂಡೇಷನ್‌ನಿ0ದ `ವಿಜಯವಾಣಿ ವಿದ್ಯಾರ್ಥಿ- ಉದ್ಯೋಗ ಮಿತ್ರ' ಪತ್ರಿಕೆಯನ್ನು ಸೋಮವಾರ ವಿತರಿಸಿ ಅವರು ಮಾತನಾಡಿದರು.

ಎಸ್‌ಎಸ್‌ಎಲ್‌ಸಿ ಎಂದಾಕ್ಷಣ ಪಾಲಕರು ಒತ್ತಡ ಹೇರುವುದು ಸಹಜ. ಒತ್ತಡ ಮುಕ್ತರಾಗಲು ಪಾಠಾಭ್ಯಾಸದ ಜತೆ ಆಟಗಳಲ್ಲೂ ತೊಡಗಬೇಕು. ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ಸೇರಿ ಶೈಕ್ಷಣಿಕ ಚಟುವಟಿಕೆಗಳಿಗೆ ವೈಶುದೀಪ ಫೌಂಡೇಷನ್ ಶ್ರಮಿಸುತ್ತಿದೆ. ವಿಜಯವಾಣಿ ಹೊರತರುತ್ತಿರುವ ಎಸ್‌ಎಸ್‌ಎಲ್‌ಸಿ ಪಠ್ಯಾಧಾರಿತ ವಿದ್ಯಾರ್ಥಿ ಮಿತ್ರ ಪತ್ರಿಕೆಯನ್ನು ಸದುಪಯೋಗ ಪಡೆದುಕೊಳ್ಳಿ ಎಂದರು.

ಕಾ0ಗ್ರೆಸ್ ಸರ್ಕಾರದ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಅರವಿಂದ ಏಗನಗೌಡರ ಮಾತನಾಡಿ, ಈ ಹಿಂದೆ ವಿನಯ ಕುಲಕರ್ಣಿಯವರು ಉಸ್ತುವಾರಿ ಸಚಿವರಾಗಿದ್ದಾಗ ತಮ್ಮ ವೈಶುದೀಪ ಫೌಂಡೇಷನ್‌ನಿ0ದ ವರ್ಷವಿಡೀ ಶೈಕ್ಷಣಿಕ ಚಟುವಟಿಕೆ ಆಯೋಜಿಸಲಾಗಿತ್ತು. ಜಿಲ್ಲಾಡಳಿತ, ಶಿಕ್ಷಣ ತಜ್ಞರ ಸಹಯೋಗದೊಂದಿಗೆ ಫೌಂಡೇಷನ್ ಅಧ್ಯಕ್ಷರಾದ ಶಿವಲೀಲಾ ಕುಲಕರ್ಣಿಯವರ ಶ್ರಮದಿಂದ ಜಿಲ್ಲೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 8ನೇ ಸ್ಥಾನ ಗಳಿಸಿತ್ತು. ವಿದ್ಯಾರ್ಥಿಗಳು ಶಿಸ್ತುಬದ್ಧ ಓದು ರೂಢಿಸಿಕೊಂಡು ಉತ್ತಮ ಫಲಿತಾಂಶ ಗಳಿಸಿ ಶಾಲೆ ಮತ್ತು ಪಾಲಕರಿಗೆ ಕೀರ್ತಿ ತರಬೇಕು ಎಂದರು.

ಶ್ರೀ ಮುರುಘರಾಜೇಂದ್ರ ಉಚಿತ ಪ್ರಸಾದ ನಿಲಯದ ಉಪಾಧ್ಯಕ್ಷ ನಾಗರಾಜ ಪಟ್ಟಣಶೆಟ್ಟಿ, ಕಾರ್ಯದರ್ಶಿ ಡಿ.ಬಿ. ಲಕಮನಹಳ್ಳಿ, ಪಾಲಿಕೆ ಸದಸ್ಯರಾದ ಪ್ರಕಾಶ ಘಾಟಗೆ, ದೀಪಾ ನೀರಲಕಟ್ಟಿ, ದಿಲ್‌ಶಾದಬೇಗಂ ನದಾಫ್, ಸೂರವ್ವ ಪಾಟೀಲ, ಇತರರಿದ್ದರು.

ಮುಖ್ಯಾಧ್ಯಾಪಕ ಎಫ್.ಕೆ. ಅಸುಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ವೈ. ಪಾಟೀಲ ನಿರೂಪಿಸಿದರು. ಎಸ್.ಎಸ್. ಮುಳಗುಂದಮಠ ವಂದಿಸಿದರು.