ಶಿಗ್ಗಾಂವಿ(ಗ್ರಾ): ಪ್ರತಿಯೊಬ್ಬ ವಿದ್ಯಾರ್ಥಿ ಯಶಸ್ವಿಯಾಗಲು ಗುರು ಮತ್ತು ಗುರಿ ಸ್ಪಷ್ಟವಾಗಿರಬೇಕು. ಗುರುವಿನ ಮಾರ್ಗದರ್ಶನ, ನಿಖರವಾದ ಗುರಿಯೆಡಿಗೆ ಸತತ ಪರಿಶ್ರಮ ಮತ್ತು ಪ್ರಯತ್ನದಿಂದ ಮಾತ್ರ ಪ್ರತಿಫಲ ದೊರೆಯುತ್ತದೆ ಎಂದು ಸುಬೇದಾರ ಇಸಾಕ್ ಅಹ್ಮದ್ ಮತ್ತೂರ ಹೇಳಿದರು.
ತಾಲೂಕಿನ ಬನ್ನೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಸಹಪಾಠಿ ಸ್ನೇಹಿತರ ಬಳಗ ಆಯೋಜಿಸಿದ್ದ ‘ಸೈನಿಕನಿಗೊಂದು ಸಲಾಂ’ ಕಾರ್ಯಕ್ರಮದಲ್ಲಿ ಗೌರವ ಸಮರ್ಪಣೆ ಸ್ವೀಕರಿಸಿ ಅವರು ಮಾತನಾಡಿದರು. ಭಾರತೀಯ ಸೇನೆಯು ವಿಶ್ವದಲ್ಲಿಯೇ ಬಲಾಢ್ಯ ಪಡೆಯನ್ನು ಹೊಂದಿದೆ. ಅಂತಹ ವಿಶ್ವ ಶ್ರೇಷ್ಠ ಸೈನ್ಯದಲ್ಲಿ ತಾವೆಲ್ಲರೂ ಸೇರಬೇಕಾದರೆ ಈಗಿನಿಂದಲೇ ಪಾಠ ಪ್ರವಚನಗಳ ಜತೆ ದೈಹಿಕ ಸಾಮರ್ಥ್ಯದೆಡೆಗೆ ಗಮನ ಹರಿಸಬೇಕು ಎಂದರು.
ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ, ಸೇನೆಗೆ ಸೇರಲು ಶಾಲೆಯ ಹಾಗೂ ತಾಲೂಕಿನ ಪ್ರತಿ ಯುವಕರಿಗೂ ತರಬೇತಿಯ ಅವಶ್ಯಕತೆ ಇದೆ. ಇಸಾಕ್ ಅಹ್ಮದ್ ಅವರ ಮಾರ್ಗದರ್ಶನದಲ್ಲಿ ಟ್ರೈನಿಂಗ್ ಅಕಾಡೆಮಿ ಸ್ಥಾಪಿಸಿದರೆ ಭಾರತ ಸೇವಾ ಸಂಸ್ಥೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷೆ ಸರೋಜಾ ಕಮ್ಮಾರ, ನಿಂಗಪ್ಪ ದುಂಡಪ್ಪನವರ, ಮುಖ್ಯೋಪಾಧ್ಯಾಯ ಶ್ರೀನಿವಾಸ, ಶಂಕರಗೌಡ ದುಂಡಿಗೌಡ್ರ, ಬಸವರಾಜ ಮಾಯಣ್ಣವರ, ಟಿ.ವಿ. ಪಾಟೀಲ, ವೀರಭದ್ರಪ್ಪ ಅಗಡಿ, ಬಸವರಾಜ ಪೂಜಾರ, ಮಂಜುನಾಥ ಹಡಪದ ಇತರರು ಉಪಸ್ಥಿತರಿದ್ದರು.