ಜಿಲ್ಲೆ

ವೈಯಕ್ತಿಕ ಆರೋಗ್ಯದತ್ತ ಇರಲಿ ಚಿತ್ತ

Davangere - Desk - Mahesh Babu E

ನಾಯಕನಹಟ್ಟಿ: ಪಟ್ಟಣದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕರ ಸೇವೆ ಅನನ್ಯ ಎಂದು ಪ್ರಭಾರ ಮುಖ್ಯಾಧಿಕಾರಿ ಎಂ.ಶಿವಕುಮಾರ್ ಹೇಳಿದರು.

ಪಪಂ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಪೌರಕಾರ್ಮಿರನ್ನು ಸನ್ಮಾನಿಸಿ ಮಾತನಾಡಿದರು.

ಸಂದಿಗ್ಧ ಪರಿಸ್ಥಿತಿಯಲ್ಲೂ ಪೌರಕಾರ್ಮಿಕರು ಜೀವದ ಹಂಗು ತೊರೆದು ಸ್ವಚ್ಛತೆಯಲ್ಲಿ ತೊಡಗಿ ಸೇವೆ ಸಲ್ಲಿಸುತ್ತಾರೆ. ಮಳೆ, ಗಾಳಿ, ಬಿಸಲು, ಚರಂಡಿ, ದುರ್ವಾಸನೆ ಲೆಕ್ಕಿಸದೆ ಸ್ವಚ್ಛಗೊಳಿಸುವ ಕಾರ್ಯ ಮಹತ್ತರವಾದುದು ಎಂದರು.

ಪೌರಕಾರ್ಮಿಕರು ತಮ್ಮ ವೈಯುಕ್ತಿಕ ಹಾಗೂ ಕುಟುಂಬದ ಸದಸ್ಯರ ಆರೋಗ್ಯದ ರಕ್ಷಣೆಯ ಕಡೆಗೆ ಹೆಚ್ಚು ಗಮನಹರಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿ ವರ್ಗ ಸ್ಪಂದಿಸಲಿದೆ ಎಂದು ಹೇಳಿದರು.

ಉತ್ತಮವಾಗಿ ಕಾರ್ಯ ನಿರ್ವಹಿಸಿದ ಪೌರಕಾರ್ಮಿಕರು ಮತ್ತು ಪೌರಕಾರ್ಮಿಕರ ಕ್ರೀಡಾಕೂಟದಲ್ಲಿ ಜಯಗಳಿಸಿದ ಪೌರಕಾರ್ಮಿಕ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ಆರೋಗ್ಯ ನಿರೀಕ್ಷಕ ಟಿ.ರುದ್ರಮುನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಪಂ ಸದಸ್ಯರಾದ ದುರುಗಪ್ಪ, ಕೆ.ಪಿ.ತಿಪ್ಪೇಸ್ವಾಮಿ, ಸೈಯದ್ ಅನ್ವರ್, ಪಿ.ಓಬಯ್ಯ, ಮರಿಪಾಲಯ್ಯ, ಎಂ.ಎಸ್.ಸುರೇಶ್, ಟಿ.ತಿಪ್ಪೇಸ್ವಾಮಿ, ಸಂದೀಪ್, ಸುರೇಶ್, ರತ್ನಮ್ಮ, ಲತಾ ಇದ್ದರು.