ಮಸ್ಕಿ: ಮಳೆಗಾಲ ಆರಂಭವಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಸಂಭವ ಹೆಚ್ಚು. ಆದ್ದರಿಂದ ಎಲ್ಲರೂ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು ಎಂದು ಬಳಗಾನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ದಾವಲ್‌ಸಾಬ್ ಹೇಳಿದರು.
ತಾಲೂಕಿನ ಉದ್ಬಾಳ ಗ್ರಾಮದ ಸಮೀಪ ತುಂಗಭದ್ರಾ ಎಡದಂಡೆ ನಾಲೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನರೇಗಾ ಕೂಲಿಕಾರರ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು. ಕುಡಿವ ನೀರನ್ನು ಕಾಯಿಸಿ ಕುಡಿಯಬೇಕು. ಕಲುಷಿತ ನೀರಿನ ಸೇವನೆಯಿಂದ ನಿರ್ಜಲೀಕರಣ ಉಂಟಾಗುತ್ತದೆ. ಮಕ್ಕಳು, ವೃದ್ಧರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಮಹಿಳೆಯರು ಕುಟುಂಬ ನಿರ್ವಹಣೆ ಜತೆ ವೈಯಕ್ತಿಕ ಸ್ವಚ್ಛತೆಗೆ ಹಾಗೂ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ರೋಗದ ಲಕ್ಷಣ ಕಂಡುಬಂದರೆ ತಕ್ಷಣ ಚಿಕಿತ್ಸೆ ಪಡೆಯಬೇಕು. ಯುವಕರು ದುಶ್ಚಟಗಳಿಂದ ದೂರವಿರಬೇಕು. ಸರ್ಕಾರ ಉಚಿತವಾಗಿ ಚಿಕಿತ್ಸೆ, ಔಷಧ ನೀಡುತ್ತಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ತಾಪಂ ಐಇಸಿ ಸಂಯೋಜಕ ಸತೀಶ್ ಹೊಕ್ರಾಣಿ, ಬಿಎಫ್‌ಟಿ ಬೀರಪ್ಪ, ಗ್ರಾಪಂ ಕಾರ್ಯದರ್ಶಿ ತಿಮ್ಮಣ್ಣ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಹನುಮೇಶ್, ಮಂಜು, ಹೇಮಲತಾ, ಆಶಾ ಕಾರ್ಯಕರ್ತೆಯರಾದ ಮಹಾದೇವಮ್ಮ, ರೇಣುಕಾ ಇತರರಿದ್ದರು.