ಸಿದ್ದಾಪುರ: ನಮ್ಮ ಜೀವನ ವಿಧಾನ ಬದಲಾಗುತ್ತಿದೆ. ಜಗತ್ತಿನಲ್ಲಿ ಆಯುರ್ವೆದ ಕ್ಷಿಪ್ರವಾಗಿ ಬೆಳೆಯುತ್ತಿದೆ. ಇಡೀ ಜಗತ್ತು ಇಂದು ಆಯುರ್ವೆದದತ್ತ ಹೊರಳುತ್ತಿರುವುದರಿಂದ ಕೃಷಿಕರು ಗಿಡಮೂಲಿಕೆ ಅಂದರೆ ಔಷಧೀಯ ಸಸ್ಯಗಳನ್ನು ಬೆಳೆಸುವತ್ತ ಗಮನ ಹರಿಸಬೇಕು ಎಂದು ಕೆನರಾ ವಲಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ ಜಿ.ಆರ್. ಹೇಳಿದರು.
ತಾಲೂಕಿನ ಹೇಮಗಾರನಲ್ಲಿ ಕರ್ನಾಟಕ ಔಷಧ ಗಿಡಮೂಲಿಕಾ ಪ್ರಾಧಿಕಾರ, ನೇಟಿವ್ ಸರ್ಕಲ್, ಸಿದ್ದಾಪುರ ಧನ್ವಂತರಿ ಆಯುರ್ವೆದ ಮಹಾವಿದ್ಯಾಲ ಹಾಗೂ ಶಿರಸಿ ಟಿಎಸ್ಎಸ್ ಆಶ್ರಯದಲ್ಲಿ ಆಯೋಜಸಿದ್ದ ‘ಕೃಷಿಕರಿಗಾಗಿ ಆಯುರ್ವೆದ’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಆಯುರ್ವೆದಕ್ಕೆ ಸೂಕ್ತ ಕಚ್ಚಾವಸ್ತುಗಳು ದೊರೆಯುವುದು ಕಷ್ಟವಾಗುತ್ತಿರುವುದರಿಂದ ಕೃಷಿಕರು ಅಡಕೆ ತೋಟಗಳಲ್ಲಿ ಗಿಡಮೂಲಿಕೆಗಳನ್ನು ಬೆಳೆಸಬೇಕು. ಅಗತ್ಯ ಗಿಡಮೂಲಿಕೆಗಳನ್ನು ಬೆಳೆಸುವುದು ಇಂದು ಅಗತ್ಯವಾಗಿದೆ. ಬೆಟ್ಟಗಳಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸಬೇಕು, ಅವುಗಳಿಗೆ ಸೂಕ್ತ ಮಾರುಕಟ್ಟೆ ಕೂಡ ಲಭ್ಯವಿದೆ ಎಂದರು.
ಸಿದ್ದಾಪುರ ಶಿಕ್ಷಣ ಪ್ರಸಾರ ಸಮಿತಿ ಉಪಾಧ್ಯಕ್ಷ ಡಾ. ಶಶಿಭೂಷಣ ಹೆಗಡೆ ಮಾತನಾಡಿ, ಅಡಕೆಗೆ ಪರ್ಯಾಯವಾಗಿ ಔಷಧೀಯ ಸಸ್ಯಗಳನ್ನು ಬೆಳೆಸಬಹುದಾಗಿದೆ. ಆಯುರ್ವೆದ ಫಾರ್ಮಸಿ ಉದ್ಯಮಗಳನ್ನು ಆರಂಭಿಸಲು ಇಲ್ಲಿ ವಿಫುಲ ಅವಕಾಶಗಳಿವೆ. ಅಡಕೆ ತೋಟಿಗರಿಗೆ ಆಯುರ್ವೆದದ ಬಗ್ಗೆ ತಿಳಿವಳಿಕೆ ಮೂಡಿಸುವುದಲ್ಲದೆ ಸಸ್ಯಗಳನ್ನು ಬೆಳೆಸುವ ತಂತ್ರಜ್ಞಾನವನ್ನು ನೀಡಬೇಕು ಎಂದರು.
ಕರ್ನಾಟಕ ಔಷಧೀಯ ಸಸ್ಯಗಳ ಪ್ರಾಧಿಕಾರದ ನಿರ್ದೇಶಕ ಡಾ. ಎಂ.ಜೆ. ಪ್ರಭು ಮಾತನಾಡಿ, ಕಾಡಿನಲ್ಲಿ ನೈಸರ್ಗಿಕವಾಗಿ ದೊರೆಯುವ ಗಿಡಮೂಲಿಕೆಗಳು ಕಡಿಮೆಯಾಗುತ್ತಿದೆ. ಅದಕ್ಕಾಗಿ ರೈತರಿಗೆ ಔಷಧೀಯ ಸಸ್ಯಗಳನ್ನು ಬೆಳೆಸಲು ಪ್ರೋತ್ಸಾಹ ನೀಡಲಾಗುತ್ತಿದೆ. ಒಬ್ಬಿಬ್ಬರು ಬೆಳೆ ತೆಗೆಯುವುದಕ್ಕಿಂತ ಗುಂಪು ನಿರ್ವಹಣೆ ಸೂಕ್ತ. ಇದರಿಂದ ಉತ್ತಮ ಮಾರುಕಟ್ಟೆ ದೊರೆಯುವುದರೊಂದಿಗೆ ಆರ್ಥಿಕ ಸಬಲೀಕರಣ ಸಾಧ್ಯವಾಗುತ್ತದೆ ಎಂದರು.
ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ, ಪರಿಸರ ಬರಹಗಾರ ಶಿವಾನಂದ ಕಳವೆ, ರಾಜ್ಯ ಜೀವ ವೈವಿಧ್ಯ ಮಂಡಳಿ ನಿರ್ದೇಶಕ ಡಾ.ಸತ್ಯನಾರಾಯಣ ಭಟ್ಟ ಉಪಸ್ಥಿತರಿದ್ದರು.
ಸಂವಾದ: ಕೃಷಿಕರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಶಿರಸಿ ಅರಣ್ಯ ಕಾಲೇಜಿನ ನಿವೃತ್ತ ಡೀನ್ ಡಾ.ಜಗದೀಶ ರೈತರಿಗಿರುವ ಸಾವಾಲುಗಳ ಕುರಿತು ಹಾಗೂ ಮಹಾಲಿಂಗಪುರದ ರೋಹಿಣಿ ಸಮೂಹ ಸಂಸ್ಥೆ ಸಂಚಾಲಕ ಎಂ.ವೈ. ಕಟ್ಟಿ ಕಾಂಪೋಸ್ಟ್ ಗೊಬ್ಬರ ಕುರಿತು ವಿವರಿಸಿದರು.
ಸಂವಾದದಲ್ಲಿ ಪ್ರಕಾಶ ಮಂಚಾಲೆ, ರಾಧಕೃಷ್ಣ ಬಂದಗದ್ದೆ, ಕಾಗೋ ಕಂಪನಿಯ ದೇವಾಂಶ ಜೋಶಿ, ಚಂದ್ರಮತಿ ನಾಯಕ ಅಂಕೋಲಾ, ಆರ್.ಎಸ್. ಹೆಗಡೆ ತೊರ್ವೆ, ವಿನಾಯಕ ಭಟ್ಟ ಅಡವಿತೋಟ, ಎಸ್.ಎಂ. ಹೆಗಡೆ ಇತರರಿದ್ದರು. ಜಿ.ಕೆ. ಭಟ್ಟ ಕಶಿಗೆ,ನಾಗರಾಜ ಹೆಗಡೆ , ನೇಟಿವ್ ಸರ್ಕಲ್ನ ಮಹೇಶ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.