ಹಾನಗಲ್ಲ: ಮುಂಗಾರು ಮಳೆ ಇಲ್ಲದೇ ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದು, ಸಮರ್ಪಕವಾಗಿ ತ್ರೀ ಫೇಸ್ ವಿದ್ಯುತ್ ಪೂರೈಸಲು ಗಮನಹರಿಸಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಶಾಸಕ ಶ್ರೀನಿವಾಸ ಮಾನೆ ಸೂಚನೆ ನೀಡಿದರು.
ಪಟ್ಟಣದಲ್ಲಿ ಮಂಗಳವಾರ ಹೆಸ್ಕಾಂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಸಮರ್ಪಕವಾಗಿ ತ್ರೀ ಫೇಸ್ ವಿದ್ಯುತ್ ಪೂರೈಸುತ್ತಿಲ್ಲ ಎನ್ನುವ ದೂರು ರೈತ ಸಮೂಹದಿಂದ ಕೇಳಿ ಬರುತ್ತಿದ್ದು, ಸಮಸ್ಯೆ ಹೋಗಲಾಡಿಸಬೇಕು. ಕೃಷಿ ಪಂಪಸೆಟ್ಗಳಿಗೆ ವಿದ್ಯುತ್ ಪೂರೈಸುವ ಸಮಯವನ್ನು ಮುಂಚಿತವಾಗಿ ತಿಳಿಸುವುದರಿಂದ ರೈತರಿಗೆ ಅನುಕೂಲವಾಗಲಿದೆ. ತಕ್ಷಣವೇ ಸುಟ್ಟಿರುವ ಟ್ರಾನ್ಸಫಾರ್ಮರ್ಗಳನ್ನು ಬದಲಾಯಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ನೂತನವಾಗಿ ನಿರ್ವಿುಸಲು ಉದ್ದೇಶಿಸಿರುವ 110 ಕೆ.ವಿ. ವಿದ್ಯುತ್ ಕೇಂದ್ರಕ್ಕೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಬಮ್ಮನಹಳ್ಳಿ ಮತ್ತು ಬೆಳಗಾಲಪೇಟೆ ಗ್ರಾಮಗಳಲ್ಲಿನ 33 ಕೆ.ವಿ. ವಿದ್ಯುತ್ ಉಪ ಕೇಂದ್ರಗಳನ್ನು 110 ಕೆ.ವಿ. ಕೇಂದ್ರಗಳಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ತಾಂತ್ರಿಕ ಮಂಜೂರಾತಿ ಹಂತದಲ್ಲಿ ಬಾಕಿ ಉಳಿದಿದೆ. ಇನ್ನು ಹೊಸದಾಗಿ ಗೊಂದಿ ಗ್ರಾಮದಲ್ಲಿ 110 ಕೆ.ವಿ. ವಿದ್ಯುತ್ ಕೇಂದ್ರ ನಿರ್ವಿುಸಲು ತಾಂತ್ರಿಕ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೆಸ್ಕಾಂ ಎಇಇ ಆನಂದ ಸುವರ್ಣಕರ ವಿವರಿಸಿದರು. ಹೆಸ್ಕಾಂ ಅಕ್ಕಿಆಲೂರು ಶಾಖಾಧಿಕಾರಿ ಚನ್ನಪ್ಪ ದೊಡ್ಡಮನಿ ಸಭೆಯಲ್ಲಿದ್ದರು.
ಗೃಹಲಕ್ಷ್ಮಿ ಉದ್ಘಾಟನೆ ಹಿನ್ನೆಲೆ ಸಭೆ
ಹಾನಗಲ್ಲ: ಮೈಸೂರಿನಲ್ಲಿ ಆ. 30ರಂದು ನಡೆಯಲಿರುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ ಉದ್ಘಾಟನೆ ಸಮಾರಂಭದ ಹಿನ್ನೆಲೆಯಲ್ಲಿ ಶಾಸಕ ಶ್ರೀನಿವಾಸ ಮಾನೆ ಅವರು ಪ್ರಮುಖ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಸಲಹೆ-ಸೂಚನೆ ನೀಡಿದರು. ತಾಲೂಕಿನ ಪ್ರತಿ ಗ್ರಾಪಂ ಕೇಂದ್ರ ಸ್ಥಾನಗಳಲ್ಲಿ ಕಾರ್ಯಕ್ರಮ ಆಯೋಜಿಸಿ ಮೈಸೂರಿನಲ್ಲಿ ನಡೆಯುವ ಉದ್ಘಾಟನಾ ಸಮಾರಂಭದ ನೇರಪ್ರಸಾರ ವೀಕ್ಷಿಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು. ಚುನಾಯಿತ ಪ್ರತಿನಿಧಿಗಳು, ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘಗಳಿಗೆ ಆಹ್ವಾನ ನೀಡಬೇಕು. ಹಾನಗಲ್ಲಿನ ಕುಮಾರೇಶ್ವರ ನಗರದಲ್ಲಿರುವ ಡಾ.ಬಾಬು ಜಗಜೀವನರಾಮ್ ಭವನದಲ್ಲಿ ತಾಲೂಕು ಮಟ್ಟದ ಕಾರ್ಯಕ್ರಮ ಆಯೋಜಿಸುವ ಕುರಿತು ನಿರ್ಣಯಿಸಲಾಯಿತು. ಸಮಾರಂಭದಲ್ಲಿ ಪಾಲ್ಗೊಳ್ಳುವವರಿಗೆ ಊಟ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕ ಮಾನೆ ಸೂಚನೆ ನೀಡಿದರು. ತಾಲೂಕು ತಹಸೀಲ್ದಾರ್ ರವಿಕುಮಾರ ಕೊರವರ, ತಾಪಂ ಇಒ ಮಲ್ಲಿಕಾರ್ಜುನ ಸಾಲಿಮಠ, ಸಿಡಿಪಿಒ ರಂಗನಾಥ, ಬಿಇಒ ವಿ.ವಿ. ಸಾಲಿಮಠ, ಪುರಸಭೆ ಮುಖ್ಯಾಧಿಕಾರಿ ಜಗದೀಶ ವೈ.ಕೆ., ಯೋಜನಾಧಿಕಾರಿ ಶಿವಾನಂದ ಕ್ಯಾಲಕೊಂಡ, ಇತರರಿದ್ದರು.
ಹಾನಗಲ್ಲ ತಾಲೂಕಿನಲ್ಲಿ ವಿದ್ಯುತ್ ಬೇಡಿಕೆಗೆ ಅನುಗುಣವಾಗಿ ಪೂರೈಸಲು ಹೊಸದಾಗಿ ವಿದ್ಯುತ್ ಕೇಂದ್ರಗಳ ಸ್ಥಾಪನೆ ಹಾಗೂ ಉಪಕೇಂದ್ರಗಳ ಮೇಲ್ದರ್ಜೆಗೇರಿಸಲು ಪ್ರಯತ್ನಿಸಲಾಗುತ್ತಿದೆ. ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಸಲು ತಾಲೂಕಿನಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳದೇ ಇರುವುದರಿಂದ ಸಮಸ್ಯೆ ಕಾಣಿಸಿಕೊಂಡಿದೆ. ಹಂತ ಹಂತವಾಗಿ ಸಮಸ್ಯೆಯ ಪರಿಹಾರಕ್ಕೆ ಯತ್ನಿಸಲಾಗುತ್ತಿದೆ. | ಶ್ರೀನಿವಾಸ ಮಾನೆ ಶಾಸಕ