ಜಿಲ್ಲೆ

ಪಿಲ್ಲರ್‌ಗೆ ಅಳವಡಿಸಿದ್ದ ಕಬ್ಬಿಣದ ಸಲಾಕೆ ಕುಸಿತ, ಕಲ್ಲಡ್ಕದಲ್ಲಿ ಫ್ಲೈಓವರ್ ಕಾಮಗಾರಿ ವೇಳೆ ಅನಾಹುತ

Dakshina Kannada

ಬಂಟ್ವಾಳ: ಬಿ.ಸಿ.ರೋಡ್-ಹಾಸನ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾಮಗಾರಿ ವೇಳೆ ಕಲ್ಲಡ್ಕದಲ್ಲಿ ನಡೆಯುತ್ತಿರುವ ಫ್ಲೈ ಓವರ್ ಕಾಮಗಾರಿಯ ನಿರ್ಮಾಣ ಹಂತದ ಪಿಲ್ಲರ್‌ಗೆ ಅಳವಡಿಸಿದ್ದ ಕಬ್ಬಿಣದ ಸಲಾಕೆ ಗುರುವಾರ ಮಧ್ಯಾಹ್ನ ಹಠಾತ್ ಬಾಗಿ ಕುಸಿತ ಸ್ಥಿತಿಯಲ್ಲಿದೆ.

ಕಲ್ಲಡ್ಕ ಪೇಟೆಯಲ್ಲಿ ಕಳೆದ ಕೆಲವು ತಿಂಗಳಿನಿಂದ ಫ್ಲೈ ಓವರ್ ನಿರ್ಮಾಣ ಕೆಲಸ ಬಹಳ ನಿಧಾನಗತಿಯಲ್ಲಿ ಸಾಗುತ್ತಿದ್ದು, ಮೊದಲೇ ವಾಹನ ಸವಾರರು ಹಾಗೂ ಸಾರ್ವಜನಿಕರು ಹಲವು ರೀತಿಯ ತೊಂದರೆ ಅನುಭವಿಸುತ್ತಿದ್ದಾರೆ. ಕಾಮಗಾರಿ ತೀರ ಅವೈಜ್ಞಾನಿಕ ರೀತಿಯಲ್ಲಿದೆ ಎಂದು ಸಾರ್ವಜನಿಕರು ಆರೋಪಿಸಿ, ಆಕ್ರೋಶ ವ್ಯಕ್ತಪಡಿಸುತ್ತಿರುವ ಮಧ್ಯೆಯೇ ಹಗಲು ಹೊತ್ತಿನಲ್ಲೇ ನಿರ್ಮಾಣ ಹಂತದ ಪಿಲ್ಲರ್‌ನ ರಾಡ್‌ಗಳು ಬಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಅಸುರಕ್ಷಿತ ಹಾಗೂ ಅವೈಜ್ಞಾನಿಕ ರೀತಿಯ ಕಾಮಗಾರಿ ನಡೆಯುತ್ತಿರುವುದೇ ಅವಾಂತರಕ್ಕೆ ಕಾರಣ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಿಲ್ಲರ್ ಕುಸಿತದ ವೇಳೆ ವಾಹನ ಹಾಗೂ ಸಾರ್ವಜನಿಕರು ಸ್ಥಳದಲ್ಲಿ ಇಲ್ಲದ ಕಾರಣ ಭಾರಿ ಅನಾಹುತ ತಪ್ಪಿದೆ.