ವಿಜಯವಾಣಿ ಸುದ್ದಿಜಾಲ ತೂಬಗೆರೆ
ತೂಬಗೆರೆ ಹೋಬಳಿಯ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯ ಮಾರ್ಗದಲ್ಲಿ ತಿರುಮಗೊಂಡನಹಳ್ಳಿ ಬಳಿ ರೈಲ್ವೆ ಗೇಟ್ ಇದ್ದು, ಮೇಲ್ಸೇತುವೆ ನಿರ್ಮಿಸಲು ಜನರು ಒತ್ತಾಯಿಸಿದ್ದರು. ಈ ಹಿನ್ನೆಲೆ ತಿರುಮಗೊಂಡನಹಳ್ಳಿ ರೈಲ್ವೆ ಗೇಟ್ ಬಳಿ ಮೇಲ್ಸೇತುವೆ ನಿರ್ಮಿಸಲು ಸರ್ಕಾರದಿಂದ ಅನುಮೋದನೆ ಸಿಕ್ಕಿದ್ದು ಶೀಘ್ರದಲ್ಲಿ ಮೇಲ್ಸೇತುವೆ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ದೊಡ್ಡಬಳ್ಳಾಪುರ ತಾಲೂಕು ಕೃಷಿ ಸಮಾಜದ ಅಧ್ಯಕ್ಷ ಆರ್.ಮುರುಳಿಧರ್ ತಿಳಿಸಿದ್ದಾರೆ.
ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಮಂದಿ ಬಂದು ಹೋಗುತ್ತಿರುತ್ತಾರೆ. ರೈಲ್ವೆ ಗೇಟ್ ಹಾಕಿದರೆ 25ಹಳ್ಳಿಗಳ ಜನರಿಗೆ ತೀವ್ರ ತೊಂದರೆ ಉಂಟಾಗುತ್ತಿತ್ತು. ವಾಹನ ದಟ್ಟಣೆ ಹೆಚ್ಚಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಮೇಲ್ಸೇತುವೆ ನಿರ್ಮಿಸಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.
ಯಾರನ್ನೂ ಕಡೆಗಣಿಸಿಲ್ಲ:
ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಸ್ಥಳೀಯ ಕಾಂಗ್ರೆಸ್ ಸದಸ್ಯರನ್ನು ಆಹ್ವಾನಿಸದೇ ಕಡೆಗಣಿಸಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಮುರುಳೀಧರ್ ದೊಡ್ಡಬಳ್ಳಾಪುರದಲ್ಲಿ ಕಾಂಗ್ರೆಸ್ ಸದೃಢವಾಗಿದೆ. ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಸೇರಿ ಹಿರಿಯ ಮುಖಂಡರು, ಕಾರ್ಯಕರ್ತರು ಪಕ್ಷವನ್ನು ತಳಮಟ್ಟದಿಂದ ಬಲಪಡಿಸುತ್ತಿದ್ದಾರೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಯಾರನ್ನೂ ಕಡೆಗಣಿಸುವುದಿಲ್ಲ. ಒಂದು ವೇಳೆ ಸಚಿವರ ಗಮನಕ್ಕೆ ಬಾರದೇ ಎಡವಟ್ಟು ಆಗಿದ್ದರೆ ಅದನ್ನು ಸರಿಪಡಿಸಿಕೊಳ್ಳಲಾಗುವುದು ಎಂದು ಹೇಳಿದರು.