ಮಡಿಕೇರಿ:
ಭಾಗಮಂಡಲ ಮೇಲ್ಸೇತುವೆ ಕಾಮಗಾರಿ ಬಹುತೇಕ ಪೂರ್ಣವಾಗಿದ್ದು ಸಾರ್ವಜನಿಕರಿಗೆ ಓಡಾಡಲು ಅವಕಾಶ ಮಾಡಿಕೊಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶುಕ್ರವಾರ ವಿಧಾನಸಭೆಯಲ್ಲಿ ತಿಳಿಸಿದರು.
ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಅವರ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು. ಮೇಲ್ಸೇತುವೆಗೆ ಕೂಡು ರಸ್ತೆ ಕಾಮಗಾರಿ ೭೩ಮೀ. ಪೂರ್ಣವಾಗಿದೆ. ಉಳಿದ ಕಾಮಗಾರಿ ಮಳೆಗಾಲ ಮುಗಿದ ತಕ್ಷಣ ಕೈಗೆತ್ತಿಕೊಳ್ಳಲಾಗುವುದು. ಅಕ್ಟೋಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣವಾಗಲಿದೆ ಎಂದು ಹೇಳಿದರು. ಈ ಸಂದರ್ಭ ಮಾತನಾಡಿದ ಪೊನ್ನಣ್ಣ, ಮೇಲ್ಸೇತುವೆಗೆ ಇನ್ನೂ ರ‌್ಯಾಂಪ್‌ಗಳನ್ನು ಕೊಟ್ಟಿಲ್ಲ. ಮೇಲ್ಸೇತುವೆ ಮೇಲೆ ಓಡಾಡಲು ಇದರಿಂದ ಸಾಧ್ಯವಾಗುತ್ತಿಲ್ಲ. ಈಗ ಮಳೆಗಾಲ ಆಗಿರುವುರಿಂದ ಕೆಳಗಡೆ ರಸ್ತೆಯಲ್ಲಿ ಅತೀ ಹೆಚ್ಚು ಕೆಸರು ಇದೆ. ಜನರು ಓಡಾಡಲು ಕೂಡ ಸಾಧ್ಯವಾಗುತ್ತಿಲ್ಲ. ೨೦೧೮ರಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಆರಂಭವಾದ ಕಾಮಗಾರಿ ಐದೂವರೆ ವರ್ಷವಾದರೂ ಪೂರ್ತಿ ಆಗಿಲ್ಲ. ಈ ಸಂಬಂಧ ಗುತ್ತಿಗೆದಾರರಿಗೆ ನೊಟೀಸ್ ಕೂಡ ಕೊಟ್ಟಿಲ್ಲ. ಇದು ದೊಡ್ಡ ತನಿಖೆ ಆಗಬೇಕಾದ ವಿಚಾರ ಎಂದರು.
ಇದಕ್ಕೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ಈ ಬಗ್ಗೆ ಪ್ರತ್ಯೇಕ ವರದಿ ತರಿಸಲಾಗುವುದು. ಆ ಕಡೆ ಹೋದಾಗ ಸ್ಥಳಕ್ಕೆ ಭೇಟಿ ನೀಡಲಾಗುವುದು. ಮೇಕೆದಾಟು ಪಾದಯಾತ್ರೆ ಅಲ್ಲಿಂದಲೇ ಪ್ರಾರಂಭಿಸಿದ್ದರಿಂದ ನನಗೂ ಭಾಗಮಂಡಲ, ತಲಕಾವೇರಿಗೆ ಹೋಗಬೇಕು ಅನ್ನಿಸುತ್ತಿದೆ. ಒಮ್ಮೆ ಹೋಗುತ್ತೇನೆ ಎಂದು ಹೇಳಿದರು.