ಜಿಲ್ಲೆ

ಪ್ರತಿ ರಾಜ್ಯದ ಅತಿ ಎತ್ತರದ ಸ್ಥಳದಲ್ಲಿ ತಿರಂಗಾ ಹಾರಾಟ

Uttara Kannada - Subash Hegde

ಕಾರವಾರ:ಸ್ವಾತಂತ್ರಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಭಾರತೀಯ ಸೇನೆಯ ಕರ್ನಲ್ ರಣವೀರ್ ಸಿಂಗ್ ಜಾಮ್‌ವಾಲ್ ಹಾಗೂ ಅವರ 13 ಜನ ಪರ್ವತಾರೋಹಿಗಳ ತಂಡವು ಹರ್ ಶಿಖರ್ ತಿರಂಗಾ' ಎಂಬ ಅಭಿಯಾನ ಕೈಗೊಂಡಿದೆ.

ದೇಶದ ಎಲ್ಲ 28 ರಾಜ್ಯಗಳ ಅತಿ ಎತ್ತರದ ಪ್ರದೇಶದಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಪರ್ವತಾರೋಹಿಗಳ ತಂಡವು ಗೋವಾ ಸೇರಿ ದೇಶದ 17 ರಾಜ್ಯಗಳ ತುತ್ತ ತುದಿಯಲ್ಲಿ ತಿರಂಗಾ ಹಾರಿಸಿ ಶುಕ್ರವಾರ ಕರ್ನಾಟಕಕ್ಕೆ ಕಾಲಿಟ್ಟಿದೆ.

ಕಾರವಾರ ಮಲ್ಲಾಪುರ, ಕೈಗಾಕ್ಕೆ ತಂಡ ಆಗಮಿಸಿತು. ರಾಜ್ಯದ ಅತ್ಯಂತ ಎತ್ತರದ ಪ್ರದೇಶವಾಗಿರುವ ಮುಳ್ಳಯ್ಯನಗಿರಿಯಲ್ಲಿ ಈ ತಂಡವು ಕೆಲವೇ ದಿನಗಳಲ್ಲಿ ಧ್ವಜಾರೋಹಣ ಮಾಡಲಿದೆ.

ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಶಿಖರವು ಸಮುದ್ರ ಮಟ್ಟದಿಂದ 1925 ಮೀಟರ್ ಎತ್ತರದಲ್ಲಿದೆ. ನ್ಯಾಷನಲ್ ಇನ್ಸ್ಟ್ಯೂಟ್ ಆಫ್ ಮೌಟೇನಿಯರಿಂಗ್ ಆ್ಯಂಡ್ ಅಡ್ವೆಂಚರ್ ಸ್ಪೋಟ್ಸ್ (ನಿಮಾಸ್) ಎಂಬ ಸರ್ಕಾರಿ ಸ್ವಾಮ್ಯದ ಸಂಸ್ಥೆಯ ಅಡಿಯಲ್ಲಿ 2022 ರ ನವೆಂಬರ್‌ನಲ್ಲಿ ಈ ಅಭಿಯಾನವು ಅರುಣಾಚಲಪ್ರದೇಶದಿಂದ ಪ್ರಾಯೋಗಿಕವಾಗಿ ಪ್ರಾರಂಭವಾಯಿತು.

"ಮೊದಲು ಮೂರು ತಿಂಗಳು ಏಳು ಈಶಾನ್ಯ ರಾಜ್ಯಗಳ ಪರ್ವತವನ್ನು ಹತ್ತಿದ ನಂತರ ವಿಶ್ವಾಸ ಮೂಡಿತು. ಎರಡನೇ ಹಂತದಲ್ಲಿ ಈ ವರ್ಷ ಮೇ ದಿಂದ ಉಳಿದ ರಾಜ್ಯಗಳಲ್ಲಿ ತಿರಂಗಾ ಹಾರಿಸುವ ಕಾರ್ಯಕ್ಕೆ ಇಳಿದಿದ್ದೇವೆ. ಕರ್ನಾಟಕ ಮುಗಿಸಿ ಕೇರಳ, ನಂತರ ಪಶ್ಚಿಮ ಬಂಗಾಳ ಕೊನೆಗೆ ಅಕ್ಟೋಬರ್ ಅಂತ್ಯಕ್ಕೆ ಸಿಕ್ಕಿಂನಲ್ಲಿ ಈ ಚಾರಣ ಅಭಿಯಾನವನ್ನು ಮುಕ್ತಾಯಗೊಳಿಸಲಿದ್ದೇವೆ"ಎನ್ನುತ್ತಾರೆ ತಂಡದ ಸದಸ್ಯರು.

ಮಲ್ಲಾಪುರ ಕೈಗಾದ ರೀಡರ್ಸ್ ರೀಗಲ್ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ರಣವೀರ್ ಸಿಂಗ್ ಜಾಮ್‌ವಾಲ್ ಅವರುವಿಜಯವಾಣಿ' ಜತೆ ತಮ್ಮ ಅಭಿಪ್ರಾಯ ಹಂಚಿಕೊಂಡರು. `ಭಾರತದಲ್ಲೇ ಸಾಹಸ ಪ್ರವಾಸೋದ್ಯಮಕ್ಕೆ, ಪರ್ವತಾರೋಹಣ ಮಾಡಲು ಅದ್ಭುತ ಸ್ಥಳಗಳಿವೆ.

ಆದರೆ, ಅವುಗಳ ಬಗ್ಗೆ ಇಲ್ಲಿನ ಜನರಿಗೆ ಸ್ಪಷ್ಟ ಅರಿವಿಲ್ಲ. ಜನರಲ್ಲಿ ಸಾಹಸದ ವಾತಾವರಣ ಸೃಷ್ಟಿ ಮಾಡುವ ಸಲುವಾಗಿ ಈ ಅಭಿಯಾನ ಪ್ರಾರಂಭಿಸಿದೆವು. ಸಾಕಷ್ಟು ಕಷ್ಟಗಳನ್ನು ಅನುಭವಿಸಿದೆವು. ಆದರೆ, ನಾವು ಈ ಗುರಿಯನ್ನು ತಲುಪುತ್ತೇವೆ ಎಂಬ ಛಲದ ಮುಂದೆ ತೊಂದರೆಗಳೆಲ್ಲ ದೊಡ್ಡದಾಗಲಿಲ್ಲ.

ಈ ಅಭಿಯಾನ ಭಾರತದ ಇತಿಹಾಸದಲ್ಲಿ ದಾಖಲೆಯಾಗಿರಲಿದೆ. ಹಾಗಾಗಿ ಇದರ ಕಾಫಿ ಟೇಬಲ್ ಬುಕ್ ಒಂದನ್ನು ಮಾಡಲಿದ್ದು, ಮುಂದೆ ಸಾಧನೆ ಮಾಡುವವರಿಗೆ ಇದೊಂದು ಮಾರ್ಗದರ್ಶನವಾಗಲಿದೆ' ಎಂದರು.
ತಂಡದ ಸದಸ್ಯರು:
ಭಾರತೀಯ ಸೇನೆಯ ಸುಬೇದಾರ್‌ಗಳಾದ ರವಿ, ಛೋಸ್‌ಗೈಲ್, ಹವಾಲ್ದಾರ್‌ಗಳಾದ ರಾಕೇಶ್ ಯಾದವ್, ನೇಹಪಾಲ್ ಸಿಂಗ್, ಕೇವಲ ಕೃಷ್ಣ, ನಾಯಕ್ ಗ್ರೇಡ್‌ನ ಗಣೇಶ ಪೌಲ್, ಸಂಜಯ ಪೋಸ್ವಾಲ್, ಲೊಗು ಕೆ., ಪರ್ವತಾರೋಹಿಗಳಾದ ಸಮ್ಯಕ್ ರಾಜ್ ಮೆಹತಾ, ರಾಜಾ ರಾಮಚೈಯ, ಲೋಪ್ಸಂಗ್ ಬಾಪು, ರೂಪಕ್ ಚೇತ್ರಿ, ತುಪ್ಟೆನ್ ಎಂಬುವವರು ತಂಡದಲ್ಲಿದ್ದಾರೆ.

ಹಲವು ಸಾಧನೆ


ಜಮ್ಮು, ಕಾಶ್ಮೀರ ರಾಜ್ಯದಲ್ಲಿ ಜನಿಸಿದ ರಣವೀರ್ ಸಿಂಗ್ ಜಾಮ್‌ವಾಲ್ ದೊಡ್ಡ ಸಾಧನೆ ಮಾಡಿದ್ದಾರೆ. ಮೌಂಟ್ ಎವರೆಸ್ಟ್ ಸೇರಿ ಹಿಮಾಲಯ ಪರ್ವತದ ಎಲ್ಲ ಏಳು ಶೃಂಗಗಳನ್ನು ಮೂರು ಬಾರಿ ಹತ್ತಿದ ಭಾರತೀಯ ಸೇನೆಯ ಮೊದಲಿಗ. ಪರ್ವತಾರೋಹಣದಲ್ಲಿ 2 ಏಷ್ಯಾ ದಾಖಲೆ, 3 ಭಾರತೀಯ ದಾಖಲೆ ಮಾಡಿದ್ದಾರೆ. ಭಾರತ ಸರ್ಕಾರದ ಪ್ರತಿಷ್ಠಿತ ಅರ್ಜುನ, ಭಾರತೀಯ ಸೇನೆಯ ಸೇವಾ ಮೆಡಲ್, ವಿಶಿಷ್ಟ ಸೇವಾ ಮೆಡಲ್ ಅವರಿಗೆ ದೊರಕಿದೆ. ಭಾರತ ಮಾತ್ರವಲ್ಲ ವಿಶ್ವದ ವಿವಿಧೆಡೆಯ ಎತ್ತರದ ಶಿಖರ ಏರಿದ್ದಾರೆ. 45 ಕ್ಕೂ ಹೆಚ್ಚು ಪರ್ವತಾರೋಹಣದ ನೇತೃತ್ವ ವಹಿಸಿದ್ದರು. ಸದ್ಯ ಅವರು ತೆರಳಿದ ಕಡೆಯೆಲ್ಲ ಭಾರತೀಯ ಸೇನೆಗೆ ಸೇರುವಂತೆ ವಿದ್ಯಾರ್ಥಿಗಳಲ್ಲಿ ಪ್ರೇರಣೆ ನೀಡುತ್ತಾರೆ.