ಲಕ್ಷ್ಮೇಶ್ವರ: ವಿದೇಶಿ ಪಕ್ಷಿಗಳ ಪಾಲಿಗೆ ಮಾಗಡಿಕೆರೆ ನೆಚ್ಚಿನ ತಾಣ. ಪ್ರತಿ ಚಳಿಗಾಲಕ್ಕೆ ನೂರಾರು ವಲಸಿಗ ಹಕ್ಕಿಗಳು ಬಂದು ಪಕ್ಷಿಪ್ರಿಯರಿಗೆ ಮುದ ನೀಡುತ್ತವೆ. ಈಗ ವಿದೇಶಿ ಹಕ್ಕಿಗಳು ತಾಲೂಕಿನ ಶೆಟ್ಟಿಕೆರೆ ಮತ್ತು ಕಪ್ಪತಗುಡ್ಡದ ಕುರುಚಲು ಅರಣ್ಯ ಪ್ರದೇಶಕ್ಕೂ ಬರುತ್ತಿದ್ದು, ಚಳಿಗಾಲ ಬಂದರೆ ಅವುಗಳ ಕಲರವ ಕಪ್ಪತಗುಡ್ಡ ಪರಿಸರದಲ್ಲಿ ಕೇಳಬಹುದಾಗಿದೆ. ಅರ‌್ಬೋರಿಯಲ್(ಮರದಲ್ಲಿ ವಾಸಿಸುವ), ಫ್ಲೈಕ್ಯಾಚರ್ಸ್ (ನೊಣಹಿಡುಕ) ಜಾತಿಯ ಹಕ್ಕಿಗಳು ಯೂರೋಪ್ ಮತ್ತು ಹಿಮಾಲಯದಿಂದ ಶೆಟ್ಟಿಕೆರೆ, ಕಪ್ಪತಗುಡ್ಡಕ್ಕೆ ಆಗಮಿಸುತ್ತವೆ. ಈ ಪ್ರದೇಶದಲ್ಲಿ ಕಂಡುಬರುವ ಐದು ವಿಶೇಷ ಜಾತಿಯ ಹಕ್ಕಿಗಳಲ್ಲಿ 2 ವಲಸೆ ಮತ್ತು 3 ಸ್ಥಳೀಯ ಹಕ್ಕಿಗಳಾಗಿವೆ. ಕಪ್ಪತಗುಡ್ಡದ ಅರಣ್ಯ ಪ್ರದೇಶದಲ್ಲಿ ವಿವಿಧ ಪ್ರಕಾರದ ಫ್ಲೈ ಕ್ಯಾಚರ್‌ಗಳನ್ನು ಗುರುತಿಸಲಾಗಿದೆ. ಅವು ಸಾವಿರಾರು ಕಿ.ಮೀ ದೂರದಿಂದ ಕಪ್ಪತಗುಡ್ಡಕ್ಕೆ ವಲಸೆ ಬರುವುದು ಕಪ್ಪತಗುಡ್ಡದ ಜೀವವೈವಿಧ್ಯ ಮತ್ತು ಇಲ್ಲಿನ ಆರೋಗ್ಯಕರ ವಾತಾವರಣವನ್ನು ಸಾಕ್ಷೀಕರಿಸುತ್ತಿವೆ.
ಕಪ್ಪತಗುಡ್ಡ ಪರಿಸರದಲ್ಲಿ 5 ಜಾತಿಯ ನೊಣಹಿಡುಕಗಳನ್ನು ಚಿತ್ರ ಸಹಿತ ದಾಖಲೆ ಮಾಡಲಾಗಿದೆ. ಕಪ್ಪತಗುಡ್ಡದ ಆವಾಸ ಸ್ಥಾನ ವಿಶೇಷವಾಗಿದ್ದು, ಕರ್ನಾಟಕದಲ್ಲಿ ದಾಖಲಾಗಿರುವ 18 ನೊಣಹಿಡುಕ ಹಕ್ಕಿಗಳ ಪೈಕಿ ಕಪ್ಪತಗುಡ್ಡ ಅರಣ್ಯದಲ್ಲಿ 10- 12 ಜಾತಿ ನೊಣಹಿಡುಕಗಳಿರುವ ಸಾಧ್ಯತೆಗಳಿವೆ. ಇವುಗಳ ಪ್ರಮುಖ ಆಹಾರ ಕೀಟಗಳು, ಕಿಟಗಳನ್ನು ತಿನ್ನುವುದರ ಮೂಲಕ ಪರಿಸರದಲ್ಲಿ ಕೀಟ ನಿಯಂತ್ರಕಗಳಾಗಿ ರೈತರಿಗೆ ಸಹಕಾರಿಯಾಗಿವೆ. ಮಂಜುನಾಥ ನಾಯಕ, ಜೀವವೈವಿಧ್ಯ ಸಂಶೋಧಕ