ದೇವದುರ್ಗ ತಾಲೂಕು ಹೂವಿನಹೆಡಗಿಯಲ್ಲಿ ಕುಡಿವ ನೀರಿನ ಪೈಪ್‌ಒಡೆದು ರಸ್ತೆ ಮೇಲೆ ನೀರು ನಿಂತಿರುವುದು. 
ಜಿಲ್ಲೆ

ಹೂವಿನಹೆಡಗಿ ಗ್ರಾಮಕ್ಕೆ ಅಶುದ್ಧ ಜಲ ಪೂರೈಕೆ

ರುದ್ರಪ್ಪ ವಾಲಿ

ದೇವದುರ್ಗ: ತಾಲೂಕಿನ ಹೂವಿನಹೆಡಗಿ ಗ್ರಾಮದಲ್ಲಿ ಕುಡಿವ ನೀರು ಸರಬರಾಜು ಮಾಡುವ ಪೈಪ್ ಒಡೆದು ಅಶುದ್ಧ ನೀರು ಪೂರೈಕೆಯಾಗುತ್ತಿದೆ. ಇದರಿಂದ ಗ್ರಾಮಸ್ಥರಿಗೆ ರೋಗದ ಭೀತಿ ಆವರಿಸಿದೆ.

ಕೃಷ್ಣಾನದಿ ತೀರದ ಪಕ್ಕದ ಗ್ರಾಮಕ್ಕೆ ಹೊಳೆ ನೀರೇ ಆಸರೆಯಾಗಿದೆ. ನದಿಯಲ್ಲಿ ಜಾಕ್‌ವೆಲ್ ನಿರ್ಮಿಸಿ ಅಲ್ಲಿಂದ ಮನೆಮನೆಗೆ ಪೈಪ್‌ಲೈನ್ ಮೂಲಕ ಜೀವಜಲ ಪೂರೈಸಲಾಗುತ್ತಿದೆ. ಒಂದು ವಾರದ ಹಿಂದೆ ಮುಖ್ಯಪೈಪ್ ಒಡೆದಿದ್ದು ಅಪಾರ ಪ್ರಮಾಣದ ನೀರು ವ್ಯರ್ಥವಾಗುತ್ತಿದೆ. ಅಲ್ಲದೆ ರಸ್ತೆ ಉದ್ದಕ್ಕೂ ನೀರು ನಿಂತು ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.

ಗ್ರಾಮದಲ್ಲಿ ಸುಮಾರು 200 ಮನೆಗಳು, 700 ಮತದಾರರು, ಒಂದು ಸಾವಿರ ಜನಸಂಖ್ಯೆಯಿದೆ.

ದೊಂಡಂಬಳಿ ಗ್ರಾಪಂಗೆ ಒಳಪಡುತ್ತಿದ್ದು, ಇಬ್ಬರು ಗ್ರಾಪಂ ಸದಸ್ಯರಿದ್ದಾರೆ. ಪೈಪ್ ಒಡೆದು 8-10ದಿನ ಕಳೆದರೂ ರಿಪೇರಿ ಮಾಡಲು ಗ್ರಾಪಂ ಆಡಳಿತ ಮುಂದಾಗಿಲ್ಲ. ಪ್ರತಿದಿನ ಮನೆಗಳಿಗೆ ನೀರು ಪೂರೈಕೆ ಮಾಡುವಾಗ ಒಡೆದ ಪೈಪ್‌ನಿಂದ ನೀರು ಸೋರಿಕೆಯಾಗುತ್ತಿದೆ. ರಸ್ತೆಯಲ್ಲಿ 50ಮೀಟರ್‌ವರೆಗೆ ಎಲ್ಲೆಂದರಲ್ಲಿ ನೀರು ನಿಲ್ಲುತ್ತಿದ್ದು, ವಾಹನಗಳ ಓಡಾಟದಿಂದ ಒಂದೆರಡು ಅಡಿ ಗುಂಡಿಗಳು ಬಿದ್ದಿವೆ.

ಎಲ್ಲೆಂದರಲ್ಲಿ ನೀರು ನಿಲ್ಲುತ್ತಿರುವ ಕಾರಣ ವಿಪರೀತ ದುರ್ನಾತ ಬೀರುತ್ತಿದ್ದು, ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಮಹಿಳೆಯರು, ಮಕ್ಕಳು, ವೃದ್ಧರು ಕೊಳಕು ನೀರಿನಲ್ಲಿ ಓಡಾಡುವ ಸ್ಥಿತಿಯಿದೆ. ವಾಹನ ಓಡಾಡಲು ಸಮಸ್ಯೆಯಾಗಿದ್ದು ಸವಾರರು ಸರ್ಕಸ್ ಮಾಡುವ ಸ್ಥಿತಿಯಿದೆ. ರಸ್ತೆ ಉದ್ದಕ್ಕೂ ನೀರು ನಿಂತಿದ್ದರಿಂದ ಅಕ್ಕಪಕ್ಕದ ಮನೆಯವರು ನರಕಯಾತನೆ ಅನುಭವಿಸುವಂತಾಗಿದೆ.

ರೋಗದ ಭೀತಿ: ಕುಡಿವ ನೀರಿನ ಪೈಪ್ ಒಡೆದಿದ್ದರಿಂದ ಮನೆಗಳಿಗೆ ಅಶುದ್ಧ ಕುಡಿವ ನೀರು ಪೂರೈಕೆಯಾಗುತ್ತಿದೆ. ಪೈಪ್‌ಒಡೆದ ಜಾಗ ತಗ್ಗುದಿನ್ನೆಯಿದ್ದು, ನೀರು ನಿಲ್ಲುತ್ತಿದೆ. ಪಂಪ್‌ಸೆಟ್ ಬಂದ್ ಮಾಡಿದ ಮೇಲೆ ಕಲುಷಿತ ನೀರು ಪೈಪ್‌ಒಳಗೆ ಮತ್ತೆ ಸೇರಿಕೊಳ್ಳುತ್ತದೆ. ಮಾರನೇದಿನ ಪಂಪ್‌ಸೆಟ್ ಸ್ಟಾರ್ಟ್ ಮಾಡಿದರೆ ನದಿನೀರಿನ ಜತೆಗೆ ಕಲುಷಿತ ನೀರು ಸೇರಿ ಪೂರೈಕೆಯಾಗುತ್ತಿದೆ. ತಾಲೂಕಿನ ಕೆಲಗ್ರಾಮಗಳಲ್ಲಿ ಈ ಹಿಂದೆ ಕಲುಷಿತ ನೀರು ಕುಡಿದು ಅವಘಡ ನಡೆದಿವೆೆ. ಇದರಿಂದ ಜನರು ನೀರು ಕುಡಿಯಲು ಹಿಂದೇಟು ಹಾಕುತ್ತಿದ್ದು, ಅಡುಗೆಗೆ ಈ ನೀರು ಬಳಸಲು ಭಯ ಪಡುತ್ತಿದ್ದಾರೆ. ಗ್ರಾಪಂ ಆಡಳಿತ ಎಚ್ಚೆತ್ತು ಒಡೆದ ಪೈಪ್ ರಿಪೇರಿ ಮಾಡಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಹೂವಿನಹೆಡಗಿಯಲ್ಲಿ ಕುಡಿವ ನೀರಿನ ಒಡೆದ ಪೈಪ್ ರಿಪೇರಿ ಮಾಡಲು ಹೊಸಪೈಪ್ ಹಾಗೂ ಜೆಸಿಬಿ ಊರಿಗೆ ಕಳಿಸಲಾಗಿತ್ತು. ನೀರಗಂಟಿ ಅನಾರೋಗ್ಯ ಹಿನ್ನೆಲೆಯಲ್ಲಿ ದುರಸ್ತಿ ತಡವಾಗಿದೆ. ನಾಳೆ ಗ್ರಾಮಕ್ಕೆ ಭೇಟಿನೀಡಿ ಪರಿಶೀಲಿಸಿ ರಿಪೇರಿ ಮಾಡಿಸುತ್ತೇವೆ. ಎರಡು ದಿನದಲ್ಲಿ ಶುದ್ಧ ನೀರು ಪೂರೈಸಲಾಗುವುದು. ಹನುಮಂತ ಪಿಡಿಒ, ದೊಂಡಂಬಳಿ ಹತ್ತು ದಿನಗಳಿಂದ ಕುಡಿವ ನೀರಿನ ಪೈಪ್ ಒಡೆದಿದ್ದು ರಿಪೇರಿ ಮಾಡುವಂತೆ ಮನವಿ ಮಾಡಿದರೂ ಗ್ರಾಪಂ ಸ್ಪಂದಿಸುತ್ತಿಲ್ಲ. ಕಲುಷಿತ ನೀರು ಮನೆಗಳಿಗೆ ಬರುತ್ತಿವೆ. ಆ ನೀರು ಕುಡಿದರೆ ವಾಂತಿ-ಭೇದಿ ಆಗಲಿದೆ. ಅಲ್ಲದೆ ನೀರು ಎಲ್ಲೆಂದರಲ್ಲಿ ನಿಂತು ಓಡಾಡಲು ಸಮಸ್ಯೆಯಾಗಿದ್ದು ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಗ್ರಾಪಂ ತಕ್ಷಣ ರಿಪೇರಿ ಮಾಡಿ ಶುದ್ಧ ನೀರು ಪೂರೈಸಬೇಕು. ಕುಬೇರಪ್ಪ ಗ್ರಾಮದ ಯುವಕ