ಕಳಸ: ಶ್ರೀ ದುರ್ಗಾ ಪೂಜಾ ಸಮಿತಿಯಿಂದ 36ನೇ ವರ್ಷದ ಸಾರ್ವಜನಿಕ ಶ್ರೀ ದುರ್ಗಾಪೂಜಾ ಮಹೋತ್ಸವದ ಎಂಟನೇ ದಿನ ಗುರುವಾರ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಪಟ್ಟಣದ ದುರ್ಗಾ ಮಂಟಪದಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ದುರ್ಗಾದೇವಿ ಸನ್ನಿಧಿಯಲ್ಲಿ ಬೆಳಗ್ಗೆ ದುರ್ಗಾಹೋಮ, ತ್ರಿಮೂರ್ತಿ ಪೂಜೆ, ಹೂವಿನಪೂಜೆ, ವೃಷಭವಾಹಿನಿ ಪಾರಾಯಣ ನಡೆದ ಬಳಿಕ ನಾಡಿನ ರೈತರಿಗೆ ಬಂದ ಸಂಕಷ್ಟ ನಿವಾರಣೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಅನ್ನದಾನ ನೆರವೇರಿತು. ಧಾರ್ಮಿಕ ಕಾರ್ಯಕ್ರಮದ ಜತೆ ರಾಜಲಕ್ಷ್ಮೀ ಜೋಷಿ ಸಂಗಡಿಗರಿಂದ ಸೌಂದರ್ಯ ಲಹರಿ ಕಾರ್ಯಕ್ರಮ, ರಾತ್ರಿ ರಂಗಪೂಜೆ ನಡೆಯಿತು. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಡಾ. ನಂದನ್ ಸಾರಥ್ಯದಲ್ಲಿ ಸಂಗೀತ ರಸಮಂಜರಿ ನಡೆಯಿತು.