ಜಿಲ್ಲೆ

ಹೂ ಕುಂಡಗಳ ಸೊಬಗು: ಮನೆಗೆ ನೈಸರ್ಗಿಕ ಮೆರುಗು

ಪಂಕಜ ಕೆ.ಎಂ.

ಬೆಂಗಳೂರ: ಆಧುನಿಕತೆಯ ಭರಾಟೆಯಲ್ಲಿ ಕಾಂಕ್ರೀಟ್ ಕಾಡಾಗಿರುವ ನಗರ ಮತ್ತು ಪಟ್ಟಣ ಪ್ರದೇಶಗಳ ಮನೆಗಳಲ್ಲಿ ಅಂಗಳವೇ ಇರುವುದಿಲ್ಲ. ಇನ್ನು ಗಿಡ ನೆಟ್ಟು ಬೆಳೆಸುವ ಮಾತೆಲ್ಲಿ? ಆದಾಗಿಯೂ ಪರಿಸರದ ಬಗ್ಗೆ ಆಸಕ್ತಿ ಉಳ್ಳವರಿಗೆ ಅಂಗಳವೇ ಬೇಕಿಲ್ಲ. ಅಂತಹವರು ಹೂ ಕುಂಡಗಳಲ್ಲೇ ಮನೆಯನ್ನು ಉದ್ಯಾನವಾಗಿ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಮನೆ ಕಟ್ಟಿಸುವುದರ ಜತೆಗೆ ಅದನ್ನು ಅಂದ ಹಾಗೂ ವಿಶೇಷವಾಗಿ ಕಾಣುವಂತೆ ಮಾಡಬೇಕು ಎಂದು ಬಯಸುವವರೇ ಹೆಚ್ಚು. ಅವರಲ್ಲಿ ಪರಿಸರ ಪ್ರೇಮಿಗಳಿದ್ದರೆ ಕೇಳಬೇಕೆ? ಮನೆಯನ್ನು ಹಸಿರುಮಯವಾಗಿಸಿ ಬಿಡುತ್ತಾರೆ. ಬಹಳಷ್ಟು ಮಂದಿ ಇಂಟೀರಿಯರ್‌ಗಿಂತ ನೈಸರ್ಗಿಕವಾಗಿ ಮನೆಯ ಅಂದ ಹೆಚ್ಚಿಸಲು ಬಯಸುತ್ತಾರೆ. ಅಂತಹವರ ಪ್ರಮುಖ ಆಯ್ಕೆ ಹೂ ಕುಂಡಗಳು.

ಕಣ್ಣಿಗೆ ತಂಪು ಮನಸ್ಸಿಗೆ ಉಲ್ಲಾಸ:

ಪರಿಸರಸ್ನೇಹಿ ಮನೆ ನಿರ್ಮಿಸಲು ಅಂಗಳ ಇರಲೇ ಬೇಕೆಂದಿಲ್ಲ. ಮನೆಯ ಮೆಟ್ಟಿಲು, ಬಾಲ್ಕನಿ, ಕಿಟಕಿ, ಕಾಂಪೌಂಡ್, ತಾರಸಿ ಹೀಗೆ ಜಾಗಕ್ಕೆ ಕೊರತೆ ಇಲ್ಲ. ಇಂತಹ ಕಡೆಗಳಲ್ಲಿ ಹೂ ಕುಂಡಗಳ ಮೂಲಕ ಸಸಿಗಳನ್ನು ಬೆಳೆಸಿ ಮನೆಯನ್ನು ಅಂದವಾಗಿಸಬಹುದಾಗಿದೆ. ಈ ಹೂ ಕುಂಡಗಳನ್ನು ಬಳಸಿ ಹಬ್ಬ ಹಾಗೂ ಕಾರ್ಯಕ್ರಮಗಳನ್ನು ವಿಶೇಷ ಅಕರ್ಷಣೆಯನ್ನಾಗಿಸಬಹುದು. ಇವು ಮನೆಯ ಸೌಂದರ್ಯವನ್ನು ಇಮ್ಮಡಿಗೊಳಿಸುವುದರ ಜತೆಗೆ ಹಸಿರು ಕಣ್ಣಿಗೆ ತಂಪು ಹಾಗೂ ಮನಸ್ಸಿಗೆ ಉಲ್ಲಾಸ ನೀಡುತ್ತದೆ.

ಹೂ ಕುಂಡಗಳ ವಿಧಗಳು:

ಹೂವಿನ ಕುಂಡ ತರುವ ಮುನ್ನ ಯಾವ ರೀತಿಯ ಹೂಕುಂಡಗಳನ್ನು ಇಟ್ಟರೆ ಹಾಗೂ ಯಾವ ರೀತಿಯ ಗಿಡಗಳನ್ನು ಬೆಳೆಸಿದರೆ ಮನೆಯ ಸೊಬಗು ಹೆಚ್ಚಲಿದೆ ಎಂಬುದನ್ನು ಮೊದಲು ನಿರ್ಧರಿಸಬೇಕು. ಆ ಸ್ಥಳಕ್ಕೆ ಯಾವ ಅಳತೆಯ ಹೂ ಕುಂಡ ಸರಿ ಹೊಂದುತ್ತದೆ. ಎಲ್ಲೆಲ್ಲಿ ತೂಗುವ ಹೂ ಕುಂಡ ಹಾಕಹುದು ಹೀಗೆ ಎಲ್ಲವನ್ನು ಯೋಚಿಸಿ ನಂತರ ಹೂ ಕುಂಡಗಳನ್ನು ಖರೀದಿಸಬೇಕು. ಕುಂಡಗಳನ್ನು ತಂದ ನಂತರ ಯಾವ ರೀತಿಯ ಸಸ್ಯಗಳನ್ನು ಬೆಳೆಸಿದರೆ ಮನೆಯೊಳಗೆ ಶುದ್ಧ ಗಾಳಿ ಸಿಗುತ್ತದೆ. ಕೆಟ್ಟ ವಾಸನೆ ದೂರಾಗಿ ಉತ್ತಮ ಪರಿಮಳ ಬೀರುತ್ತದೆ. ಧನಾತ್ಮಕ ಭಾವನೆ ಮೂಡಿಸುತ್ತದೆ ಎಂಬುದನ್ನು ಯೋಚಿಸಿ ಅಂತಹ ಗಿಡಗಳನ್ನು ಬೆಳೆಸಬೇಕು. ಹಸಿರು ಬಣ್ಣ ಅಥವಾ ವಿವಿಧ ಬಣ್ಣದ ಎಲೆಗಳಿಂದ ಕೂಡಿದ ಸಸ್ಯಗಳನ್ನು ಬೆಳೆಸಿದರೆ ಮನೆಯ ಅಂದ ಇನ್ನಷ್ಟು ಹೆಚ್ಚುತ್ತದೆ. ಉದ್ದ ಎಲೆಯ ಸಸ್ಯಗಳು ಕುಂಡದ ಸುತ್ತಲೂ ಹರಡುವುದರಿಂದ ಕುಂಡಗಳೂ ಸುಂದರವಾಗಿ ಕಾಣಿಸುತ್ತವೆ. ಕೆಲವು ಹಸಿರು ಸಸ್ಯಗಳು ಗಾಜಿನ ಲೋಟ, ಬಾಟಲಿಗಳಲ್ಲಿಯೂ ಬೆಳೆಯುತ್ತವೆ. ಬಾಗಿಲು ಅಥವಾ ಕಿಟಕಿಗಳಲ್ಲಿ ವಿವಿಧ ಬಣ್ಣಗಳಿಂದ ವಿಶೇಷವಾಗಿ ಚಿತ್ರಿಸಿದ ಕುಂಡಗಳನ್ನು ಬಳಸಿಕೊಂಡು ಅಲಂಕಾರ ಸಹ ಮಾಡಬಹುದು. ತೂಗು ಹಾಕುವ ಕುಂಡಗಳಲ್ಲಿ ಬಳ್ಳಿಯಂತಹ ಗಿಡಗಳನ್ನು ಬೆಳೆಸಬಹುದು.

ಮನೆ ಬಳಕೆಗೆ ಪೂರಕವಾದ ಸಸ್ಯಗಳು:

ಕುಂಡಗಳಲ್ಲಿ ಸಸ್ಯಗಳನ್ನು ಬೆಳೆಸುವಾಗ ಕೆಲವೊಂದು ಅಲಂಕಾರ ಸಸ್ಯಗಳು ಇರಲಿ. ಜತೆಗೆ ಮನೆಯಲ್ಲಿ ನಿತ್ಯ ಬಳಕೆಗೆ ಪೂರಕವಾದ ಸಸ್ಯಗಳೂ ಇದ್ದರೆ ಚೆನ್ನ. ಉದಾಹರಣೆಗೆ ಸೇವಂತಿಗೆ, ಡೇರೆ, ಸುಗಂದರಾಜ, ಕನಕಾಂಬರ, ಚೆಂಡು ಹೂ, ಗುಲಾಬಿ, ದವನ ಇತ್ಯಾದಿ ಹೂಗಳನ್ನು ಬೆಳೆಸಿದರೆ ನೋಡಲು ಅಂದವಾಗಿ ಕಾಣುವುದರ ಜತೆಗೆ ದೇವರ ಪೂಜೆಗೆ ನಿತ್ಯ ಹೂ ಸಹ ಸಿಗಲಿದೆ. ಇದಲ್ಲದೆ, ತಾರಸಿ ಮೇಲಿನ ಕುಂಡಗಳಲ್ಲಿ ಪುದೀನ, ಕೊತ್ತಂಬರಿ, ಮೆಣಸಿನಕಾಯಿ, ದೊಡ್ಡಪತ್ರೆ, ವಿವಿಧ ಬಗೆಯ ಸೊಪ್ಪುಗಳನ್ನು ಬೆಳೆಸಿದರೆ ನಿತ್ಯದ ಅಡುಗೆಯಲ್ಲಿ ಬಳಕೆ ಮಾಡಬಹುದು.

ನಿರ್ವಹಣೆ ಬಗ್ಗೆಯೂ ಗಮನವಿರಲಿ:

ಹೂ ಕುಂಡಗಳನ್ನು ಇರಿಸಿದರಷ್ಟೇ ಸಾಲದು, ಅದರ ನಿರ್ವಹಣೆಯ ಬಗ್ಗೆಯೂ ಗಮನ ಹರಿಸಬೇಕು. ಕಾಲ ಕಾಲಕ್ಕೆ ಗೊಬ್ಬರ ಹಾಕಬೇಕು. ಮಣ್ಣು ಬದಲಾಯಿಸಬೇಕು. ಪ್ರತಿದಿನವೂ ನೀರು ಹಾಕಬೇಕು. ಹೀಗೆ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿದರಷ್ಟೇ ಅವುಗಳ ಸೊಬಗು ಹೆಚ್ಚಲಿದೆ. ಜತೆಗೆ ತಾರಸಿಗೆ ನೀರು ಇಳಿಯದಂತೆ ವಾಟರ್ ್ರ್ೂ ಬಣ್ಣ ಬಳಸಿ ಸ್ಟಾೃಂಡ್‌ಗಳ ಮೇಲೆ ಅಲಂಕಾರಿಕವಾಗಿ ಜೋಡಿಸಿದರೆ ನೋಡಲು ಚೆಂದವಾಗಿರುತ್ತದೆ.